ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟಕ್ಕೆ ಚಾಲನೆ

ಉಡುಪಿ, ನ.25: ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಮತ್ತು ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಅಜ್ಜರಕಾಡಿನ ಜಿಲ್ಲಾ ಮಹಾತ್ಮ ಗಾಂಧೀಜಿ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ 45ನೇ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್ಪಾಲ್ ಎ.ಸುವರ್ಣ ಮಾತನಾಡಿ, ಕ್ರೀಡಾಪಟುಗಳು ನಮ್ಮ ದೇಶದ ಬಹು ದೊಡ್ಡ ಆಸ್ತಿ. ಇವರ ಯೋಗದಾನವನ್ನು ನಾವು ಹಲವು ಕ್ಷೇತ್ರಗಳಲ್ಲಿ ಕಾಣ ಬಹುದಾಗಿದೆ. ಇಂದು ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಉತ್ತಮ ಅವಕಾಶಗಳು ಲಭ್ಯವಿದೆ. ಇದರ ಪ್ರಯೋಜನ ನಾಡಿನ ಸಮಸ್ತ ಕ್ರೀಡಾಳುಗಳಿಗೆ, ಕ್ರೀಡಾ ಆಸಕ್ತರಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಸಿಗುವಂತಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ಪ್ರೊ.ಕೆ.ಆರ್.ಕವಿತಾ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು ಬಹಳ ಮುಖ್ಯ. ಕ್ರೀಡಾಳುಗಳು ಸೋಲು ಮತ್ತು ಗೆಲುವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿದರೆ ಮಾತ್ರ ನಮ್ಮ ಜೊತೆಗೆ ಕ್ರೀಡೆಯೂ ಜಯಗಳಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕಲಪತಿಗಳಾಗಿ, ರಿಜಿಸ್ಟ್ರಾರಾಗಿ ಮತ್ತು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿ ಇತೀಚೆಗೆ ನಿಧನರಾದ ಪ್ರೊ.ಕಿಶೋರ್ ಕುಮಾರ್ ಸಿ.ಕೆ ಅವರ ಸ್ಮರಣಾರ್ಥ ಬೆಳ್ಳಿಯ ಚಾಂಪಿಯನ್ಸ್ ಟ್ರೋಫಿಯನ್ನು ಈ ವೇಳೆ ಅನಾವರಣ ಮಾಡಲಾಯಿತು. ಉಡುಪಿ ಜಿಲ್ಲೆಯ ಅಮೆಚೂರ್ ಅಥ್ಲೆಟಿಕ್ ಅಸೋಶಿಯೇಶನ್ ನ ಅಧ್ಯಕ್ಷ ಹರಿಪ್ರಸಾದ್ ರೈ ಪಥಸಂಚಲನ ಮತ್ತು ದ್ವಜವಂದನೆಯನ್ನು ಸ್ವೀಕರಿಸಿದರು. ವಿದ್ಯಾರ್ಥಿನಿ ಪ್ರಗತಿ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು.
ಪಥ ಸಂಚಲನದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಪ್ರಥಮ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ದ್ವಿತೀಯ ಮತ್ತು ಪೂರ್ಣಪ್ರಜ್ಞ ಕಾಲೇಜು ಉಡುಪಿ ತೃತೀಯ ಬಹುಮಾನವನ್ನು ಪಡೆಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಜನ್ ಕೆ.ಜಿ. ವಹಿಸಿದ್ದರು.
ದಿವಂಗತ ಪ್ರೊ.ಕಿಶೋರ್ ಕುಮಾರ್ ಸಿ.ಕೆ. ಅವರ ಧರ್ಮ ಪತ್ನಿ ಅರುಣ ಕಿಶೋರ್ ಕುಮಾರ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ ಮತ್ತು ಉಡುಪಿ ಯುವ ಸವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರಾಮಚಂದ್ರ ಪಾಟ್ಕರ್ ಸ್ವಾಗತಿಸಿದರು. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ.ನಿಕೇತನ ವಂದಿಸಿದರು.







