ಮಂಗಳೂರು: ವೆನೆಜುವೆಲಾ ದೇಶದ ಮೇಲೆ ಅಮೇರಿಕಾ ದಾಳಿ ಖಂಡಿಸಿ ಪ್ರತಿಭಟನೆ

ಮಂಗಳೂರು, ಜ.5:ಸಾರ್ವಭೌಮ ರಾಷ್ಟ್ರ ವೆನಿಜುವೆಲಾ ದೇಶದ ಮೇಲೆ ಅಮೇರಿಕ ದಾಳಿ ನಡೆಸಿ ಅದರ ಅಧ್ಯಕ್ಷ ನಿಕೋಲಾಸ್ ಮಡೊರೊ ಮತ್ತವರ ಪತ್ನಿಯನ್ನು ಅಪಹರಿಸಿ, ಅಘೋಷಿತ ಯುದ್ಧ ಸಾರಿದ ಅಮೇರಿಕದ ನೀತಿಯನ್ನು ಖಂಡಿಸಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅಮೇರಿಕಾ ಜಗತ್ತಿನ ತೈಲ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾರುವುದಕ್ಕಾಗಿ ದಕ್ಷಿಣ ಅಮೇರಿಕಾದ ಪುಟ್ಟ ರಾಷ್ಟ್ರ ವೆನೆಜುವೆಲಾ ಮೇಲೆ ದಾಳಿ ನಡೆಸಿದೆ. ಅಲ್ಲಿನ ಅಧ್ಯಕ್ಷರನ್ನು ಅಪಹರಿಸಿದೆ. ಈ ಕೃತ್ಯ ಅತ್ಯಂತ ಅಮಾನವೀಯವಾಗಿದೆ. ಜಾಗತಿಕ ಶಾಂತಿಗೆ ಅಮೇರಿಕ ಹಿಂಸೆಯ ಮೂಲಕ ತಡೆ ಒಡ್ದುತ್ತಿದೆ ಎಂದು ಆಪಾದಿಸಿದರು.
ಕಾರ್ಮಿಕ ಮುಖಂಡ ಸುಕುಮಾರ್ ತೊಕ್ಕೊಟ್ಟು ಮಾತನಾಡುತ್ತಾ ಅಮೇರಿಕ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಜಗತ್ತಿನ ಅನೇಕ ದೇಶಗಳಲ್ಲಿ ಪರಸ್ಪರ ಯುದ್ಧ, ಸಂಘರ್ಷ ಸೃಷ್ಟಿಸಿದೆ. ಅನೇಕ ದೇಶದ ಮೇಲೆ ಸುಳ್ಳು ಅಪವಾದ ಹೊರಿಸಿ ಆ ದೇಶಗಳ ಸಂಪತ್ತು ದೋಚಿದೆ. ಈ ದಾಳಿಯನ್ನು ಭಾರತ ವಿರೋಧಿಸಬೇಕು ಎಂದು ಒತ್ತಾಯಿಸಿದರು.
ಸಮುದಾಯದ ಸಂಘಟನೆಯ ವಾಸುದೇವ ಉಚ್ಚಿಲ ಹಾಗೂ ದಲಿತ ನಾಯಕ ಎಂ. ದೇವದಾಸ್ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಯಾದವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಡಾ. ಕೃಷ್ಣಪ್ಪಕೊಂಚಾಡಿ, ಬಿ.ಕೆ ಇಮ್ತಿಯಾಝ್, ಜಯಂತಿ ಶೆಟ್ಟಿ, ಪ್ರಮೀಳಾ, ಭಾರತಿ ಬೋಳಾರ, ಪ್ರಮೋದೀನಿ, ಯೋಗೀತಾ ಸುವರ್ಣ ವಿಲಾಸಿನಿ, ಸುಹಾಸಿನಿ, ಸುನಿಲ್ ಕುತ್ತಾರ್, ಜಗದೀಶ್ ಬಜಾಲ್, ಪಿ.ಜಿ. ರಫೀಕ್, ಬಿಲಾಲ್ ಬೆಂಗ್ರೆ, ಕೃಷ್ಣ ತಣ್ಣೀರುಬಾವಿ, ನಾಗೇಶ್, ರಾಕೇಶ್ ಕುಂದರ್, ವಿಶ್ವನಾಥ ಮಂಜನಾಡಿ, ರಫೀಕ್ ಹರೇಕಳ, ಕೆ.ಎಚ್. ಇಕ್ಬಾಲ್, ನಾಗೇಶ್ ಕೋಟ್ಯಾನ್, ತಿಮ್ಮಪ್ಪಕೊಂಚಾಡಿ, ಶ್ರೀನಾಥ್ ಕುಲಾಲ್, ರೋಹಿದಾಸ್ ಭಟ್ನಗರ, ಮುಝಫರ್ ಅಹ್ಮದ್, ಎಂ.ಎನ್.ಶಿವಪ್ಪ, ಮೈಖೆಲ್ ಡಿಸೋಜ, ರಮೇಶ್ ಉಳ್ಳಾಲ್, ರಮೇಶ್ ಸುವರ್ಣ ಮುಲ್ಕಿ ಪಾಲ್ಗೊಂಡಿದ್ದರು.







