ಮಣಿಪಾಲ | 6ನೇ ನೇವಲ್ ಯುನಿಟ್, ಎನ್‌ಸಿಸಿ ಸಂಯುಕ್ತ ವಾರ್ಷಿಕ ತರಬೇತಿ ಶಿಬಿರ ಪ್ರಾರಂಭ

ಮಣಿಪಾಲ : 6ನೇ ಕರ್ನಾಟಕ ನೇವಲ್ ಯುನಿಟ್, ಎನ್‌ಸಿಸಿಯ 10 ದಿನಗಳ ಸಂಯುಕ್ತ ವಾರ್ಷಿಕ ತರಬೇತಿ ಶಿಬಿರವು ಎಂಐಟಿ ಮಣಿಪಾಲದಲ್ಲಿ ಪ್ರಾರಂಭಗೊಂಡಿದೆ. ಮೇ 25ರಂದು ಪ್ರಾರಂಭಗೊಂಡ ಈ ತರಬೇತಿ ಶಿಬಿರವು ಜೂ.3 ರವರೆಗೆ ನಡೆಯಲಿದೆ.
ಈ ಶಿಬಿರದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಎನ್‌ಸಿಸಿ, ನೇವಲ್ ಯುನಿಟ್‌ಗಳ 108 ನೌ ಸೈನಿಕ್ ಕ್ಯಾಂಪ್ (ಎನ್‌ಎಸ್‌ಸಿ)ಗಳ ಸ್ವಯಂಸೇವಕರು ಸೇರಿದಂತೆ ಸುಮಾರು 600 ಮಂದಿ ಕೆಡೇಟ್‌ಗಳು ಕಠಿಣ ತರಬೇತಿಯಿರುವ ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಶಿಬಿರದಲ್ಲಿ ಕರಾವಳಿ ಕರ್ನಾಟಕದ 400 ಕೆಡೇಟ್‌ಗಳು ಮತ್ತು ಮಂಗಳೂರು ಗುಂಪಿನ ಪ್ರತ್ಯೇಕವಾಗಿ ಆಯ್ಕೆಯಾದ 20 ಮಂದಿ ಐಡಿಎಸ್‌ಎಸ್‌ಸಿ ಕೆಡೇಟ್‌ಗಳು ಭಾಗವಹಿಸುತ್ತಿದ್ದಾರೆ. ಶಿಬಿರವು ಯುವಕರಲ್ಲಿ ಐಕ್ಯತೆ, ಶಿಸ್ತು ಮತ್ತು ನಾಯಕತ್ವವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಮಂಗಳೂರು ಎನ್‌ಸಿಸಿ ಗುಂಪಿನ ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಶಿಬಿರ ಕೆಡೇಟ್‌ಗಳಿಗೆ ಸೈನಿಕ ಶಿಸ್ತು, ಕಟ್ಟುನಿಟ್ಟಾದ ದಿನಚರಿ ಹಾಗೂ ವೈಯಕ್ತಿಕ ಬೆಳವಣಿಗೆಗೆ ಅವಕಾಶ ಕಲ್ಪಿಸಲಿದೆ. ಈ ಶಿಬಿರ ಎನ್‌ಸಿಸಿಯ ನಿಜವಾದ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ.ಸವಾಲಿನ ಚಟುವಟಿಕೆಗಳ ಮೂಲಕ ಸಹನೆ, ತಂಡಭಾವನೆ ಮತ್ತು ನಾಯಕತ್ವವನ್ನು ಬೆಳೆಸುವ ವೇದಿಕೆ ಇದಾಗಿದೆ ಎಂದರು.
ಲೆ.ಕಮಾಂಡರ್ ಎಂ.ಎ.ಮುಲ್ತಾನಿ ಅವರ ನೇತೃತ್ವದಲ್ಲಿ ಈ ಶಿಬಿರ ನಡೆಯುತ್ತಿದೆ. ಶಿಬಿರದಲ್ಲಿ ಪ್ರತಿದಿನ ನಿರ್ದಿಷ್ಟ ವ್ಯಾಯಾಮಗಳು, ನೇವಲ್ ವಿಷಯಗಳ ಮೇಲೆ ವಿಶೇಷ ಕ್ಲಾಸ್‌ರೂಮ್ ಪಾಠ, ಸಶಸ್ತ್ರ ಪಡೆಗಳ ಅಧಿಕಾರಿಗಳಿಂದ ಪ್ರೇರಣಾತ್ಮಕ ಉಪನ್ಯಾಸಗಳು, ವಿವಿಧ ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಿಕ ಸೇವೆ ಮತ್ತು ಸಮುದಾಯ ಅಭಿವೃದ್ಧಿ ಯೋಜನೆಗಳು ಕುರಿತು ಉಪನ್ಯಾಸ ನಡೆಯಲಿದೆ.
ಈ ಶಿಬಿರ ಎನ್‌ಸಿಸಿ ಕೆಡೇಟ್‌ಗಳಿಗೆ ಮುಂದಿನ ಹಂತದ ಎನ್‌ಸಿಸಿ ಕಾರ್ಯಕ್ರಮಗಳಿಗೆ ಅರ್ಹತೆ ಪಡೆಯಲು ಹಾಗೂ ಪ್ರತಿಷ್ಠಿತ ನೌ ಸೈನಿಕ್ ಶಿಬಿರಗಳಿಗೆ ಆಯ್ಕೆಗೊಳ್ಳಲು ಅವಕಾಶ ನೀಡುತ್ತದೆ. ಶಿಬಿರದಲ್ಲಿ ವಿಶೇಷ ಪ್ರದರ್ಶನ ನೀಡುವ ಕೆಡೇಟ್‌ಗಳನ್ನು ಗುರುತಿಸಿ ಜೂ.3ರ ಸಮಾರೋಪ ಸಮಾರಂಭದ ವೇಳೆ ಸನ್ಮಾನಿಸಲಾಗುತ್ತದೆ ಎಂದು ಹಿರಿಯ ಎನ್‌ಸಿಸಿ ಅಧಿಕಾರಿಗಳು ತಿಳಿಸಿದ್ದಾರೆ.







