Manipal | ಮೆದುಳು ನಿಷ್ಕ್ರೀಯ : ಪ್ರಣವ್ ಹೆಗ್ಡೆ ಕುಟುಂಬದಿಂದ ಅಂಗಾಂಗ ದಾನ

ಪ್ರಣವ್ ಹೆಗ್ಡೆ
ಮಣಿಪಾಲ : ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಣಿಪಾಲದ ಪ್ರಣವ್ ಹೆಗ್ಡೆ(41) ಎಂಬವರ ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಪ್ರಣವ್ ಹೆಗ್ಡೆಯ ಅಂಗಾಂಗಗಳನ್ನು ದಾನ ಮಾಡಿ ಹಲವು ರೋಗಿಗಳಿಗೆ ಹೊಸ ಬದುಕು ನೀಡಿದೆ.
ಪ್ರಣವ್ ಹೆಗ್ಡೆ ಆ.17ರಂದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರ ಸತತ ಪ್ರಯತ್ನದ ನಡುವೆಯೂ ಅವರ ಆರೋಗ್ಯ ಸುಧಾರಿಸಲಿಲ್ಲ. ಬಳಿಕ ಅವರನ್ನು ಮೆದುಳು ನಿಷ್ಕ್ರಿಯ(ಬ್ರೈನ್ ಡೆಡ್) ಎಂದು ಘೋಷಿಸಲಾಯಿತು. ಮಾನವ ಅಂಗಾಂಗ ಕಸಿ ಕಾಯಿದೆ, 1994ರ ಪ್ರಕಾರ, ಅಧಿಕೃತ ತಜ್ಞ ವೈದ್ಯರ ತಂಡ ಎರಡು ಬಾರಿ ಮೆದುಳು ನಿಷ್ಕ್ರಿಯತೆಯನ್ನು ಖಚಿತಪಡಿಸಿತು.
ಇದರ ಬಳಿಕ ಕುಟುಂಬದವರು ಸ್ವಇಚ್ಛೆಯಿಂದ ಮುಂದೆ ಬಂದು ಅವರ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಆಪ್ತರನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೂ, ಇತರರಿಗೆ ಜೀವ ನೀಡುವ ಅವರ ಈ ನಿರ್ಧಾರ ಅಪರೂಪದ ಧೈರ್ಯ ಮತ್ತು ದೊಡ್ಡ ಮನಸ್ಸನ್ನು ತೋರಿಸಿದೆ.
ಜೀವಸಾರ್ಥಕತೆ ಹಾಗೂ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಬೆಂಗಳೂರು ಇವರ ಸಮನ್ವಯದೊಂದಿಗೆ ಅಂಗಾಂಗಗಳನ್ನು ಹಂಚಿಕೆ ಮಾಡಲಾಯಿತು. ಯಕೃತ್ ಮತ್ತು ಒಂದು ಮೂತ್ರಪಿಂಡವನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕಳುಹಿಸಲಾಯಿತು. ಕಣ್ಣಿನ ಪೊರೆಗಳನ್ನು ಅತ್ತಾವರದ ಕೆಎಂಸಿಗೆ ನೀಡಲಾಯಿತು. ಕಸಿಗಾಗಿ ಕಾಯುತ್ತಿದ್ದ ನೋಂದಾಯಿತ ರೋಗಿಯೊಬ್ಬರಿಗೆ ಕಸ್ತೂರ್ಬಾ ಆಸ್ಪತ್ರೆ ಒಂದು ಮೂತ್ರ ಪಿಂಡವನ್ನು ಉಳಿಸಿಕೊಂಡಿತು ಎಂದು ಮಾಹೆ ಟೀಚಿಂಗ್ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಧಾಕರ್ ಕಂಟಿಪುಡಿ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.






