ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ ಅಂ.ರಾ. ಮನ್ನಣೆ

ಉಡುಪಿ, ಅ.20: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ (ಎಂಸಿ ಸಿಸಿಸಿ) ಯೂನಿಯನ್ ಫಾರ್ ಇಂಟರ್‌ನೇಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿಸಿ)ನ ಸದಸ್ಯತ್ವ ದೊರೆತಿದೆ.
ಈ ಪ್ರತಿಷ್ಠಿತ ಮನ್ನಣೆಯಿಂದ ಕ್ಯಾನ್ಸರ್ ಆರೈಕೆ, ಸಂಶೋಧನೆ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರವು ಜಾಗತಿಕ ಮಟ್ಟದಲ್ಲಿ ಉನ್ನತ ಶ್ರೇಣಿಗೆ ತೇರ್ಗಡೆಗೊಂಡಿದೆ.
ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ವಿಶ್ವದ ಪ್ರತಿಷ್ಠಿತ ಸಂಘಟನೆಯಾಗಿರುವ ಯುಐಸಿಸಿ ಸದಸ್ಯತ್ವ ಪಡೆಯಲು ಕಠಿಣವಾದ ನಿಬಂಧನೆಗಳಿವೆ. ಇದು ನಿಖರವಾದ ಮೌಲ್ಯಮಾಪನ ಪ್ರಕ್ರಿಯೆ ಮತ್ತು ಜಾಗತಿಕ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತವೆ. ಕ್ಯಾನ್ಸರ್ ಚಿಕಿತ್ಸೆ ಮತ್ತು ಉನ್ನತ ಸಂಶೋಧನೆ ಯನ್ನು ಮುನ್ನಡೆಸಲು ಕೇಂದ್ರದ ಅಚಲ ಬದ್ಧತೆಯನ್ನು ಬಯಸುತ್ತದೆ.
ಈ ಮನ್ನಣೆಯೊಂದಿಗೆ, ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಪ್ರಾದ್ಯಾಪಕರು ಮತ್ತು ವಿದ್ಯಾರ್ಥಿಗಳು ಅಂತಾ ರಾಷ್ಟ್ರೀಯ ತರಬೇತಿ ಅವಕಾಶಗಳಿಗೆ ನೇರ ಪ್ರವೇಶವನ್ನು ಪಡೆಯಲಿದ್ದಾರೆ. ಇದು ಕೇಂದ್ರದಲ್ಲಿ ಲಭ್ಯವಿರುವ ಶಿಕ್ಷಣ ಮತ್ತು ತರಬೇತಿಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ರಾಷ್ಟ್ರೀಯ ಮತ್ತು ಜಾಗತಿಕವಾಗಿ ಕ್ಯಾನ್ಸರ್ ಆರೈಕೆಯಲ್ಲಿ ಮುಂಚೂಣಿ ಯಲ್ಲಿ ನಿಲ್ಲಿಸುತ್ತದೆ.
ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಪ್ರೇರಕಶಕ್ತಿಗಳಾದ ಕೇಂದ್ರದ ಉಪ ಸಂಯೋಜಕರಾದ ಡಾ. ವಾಸು ದೇವ ಭಟ್ ಕೆ. ಮತ್ತು ಡಾ. ಶೆರ್ಲಿ ಸಾಲಿನ್ಸ್ ಅವರ ವಿಶೇಷ ಹಾಗೂ ದೃಢವಾದ ಪ್ರಯತ್ನಗಳು ಕೇಂದ್ರ ಉತ್ಕೃಷ್ಟ ಮನ್ನಣೆ ಪಡೆಯಲು ಕಾರಣವಾಗಿದೆ ಎಂದು ಮಾಹೆ ಪ್ರಕಟಣೆಯಲ್ಲಿ ತಿಳಿಸಿದೆ.
ಎಂಸಿಸಿಸಿಸಿ ಸಂಸ್ಥೆಗೆ ಮಾನ್ಯತೆ ನೀಡಿದ ಕುರಿತು ಪ್ರತಿಕ್ರಿಯಿಸಿರುವ ಯುಐಸಿಸಿ ಅಧ್ಯಕ್ಷ ಪ್ರೊ. ಜೆಫ್ ಡನ್ ಎಒ, ಯುಐಸಿಸಿ ಕುಟುಂಬಕ್ಕೆ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆಯ ಸೇರ್ಪಡೆ ಉತ್ಕೃಷ್ಟತೆಯ ಜಾಗತಿಕ ಮಾನದಂಡಗಳಿಗೆ ಅದರ ಬದ್ಧತೆಯನ್ನು ಸೂಚಿಸುತ್ತದೆ. ಕ್ಯಾನ್ಸರ್ ಆರೈಕೆ ಯನ್ನು ಉತ್ತಮಗೊಳಿಸುವ ಅವರ ಬದ್ಧತೆ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಯುಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕ್ಯಾರಿ ಆಡಮ್ಸ್, ಎಂಸಿಸಿಸಿಸಿಯಂತಹ ಸಂಸ್ಥೆಗಳೊಂದಿಗಿನ ಸಹಯೋಗವು ನಮ್ಮ ಧ್ಯೇಯವನ್ನು ಇನ್ನಷ್ಟು ಬಲಪಡಿಸುತ್ತದೆ. ಕ್ಯಾನ್ಸರ್ ಆರೈಕೆ ಮತ್ತು ಸಂಶೋಧನೆಯನ್ನು ಮುಂದುವ ರಿಸಲು ಜಾಗತಿಕ ಸಮುದಾಯಕ್ಕೆ ಇದರ ಅಗತ್ಯವಿದೆ ಎಂದರು.
ಡಾ.ವಾಸುದೇವ ಭಟ್ ಕೆ ಮಾತನಾಡಿ, ಯುಐಸಿಸಿ ಮಾನ್ಯತೆ ಪಡೆದಿರುವುದು ತಂಡದ ಸಮರ್ಪಣಾ ಮನೋಭಾವಕ್ಕೆ ಉದಾಹರಣೆ ಯಾಗಿದೆ. ಇದರೊಂದಿಗೆ ಕ್ಯಾನ್ಸರ್ ಆರೈಕೆಯ ಮಾನದಂಡಗಳನ್ನು ಉನ್ನತೀಕರಿಸುವ ಗುರಿಯನ್ನು ಸಾಧಿಸಿರುವ ತೃಪ್ತಿ ಇದೆ ಎಂದರು.







