ಮಣಿಪಾಲ | ಪೊಲೀಸರು, ಸಾರ್ವಜನಿಕರ ಮೇಲೆ ಪಟಾಕಿ ಎಸೆದು ಉಪಟಳ; 20 ಮಂದಿಯ ವಿರುದ್ಧ ಪ್ರಕರಣ ದಾಖಲು

(ಸಾಂದರ್ಭಿಕ ಚಿತ್ರ)
ಮಣಿಪಾಲ: ಸಾರ್ವಜನಿಕ ರಸ್ತೆಯಲ್ಲಿ ಕೆಲವರು ಗುಂಪು ಕಟ್ಟಿಕೊಂಡು ಪಟಾಕಿ ಸಿಡಿಸಿ ಪೊಲೀಸರು, ಸಾರ್ವಜನಿಕರು ಹಾಗೂ ವಾಹನ ಸವಾರರ ಮೇಲೆ ಎಸೆದು ಉಪಟಳ ನೀಡಿರುವ ಘಟನೆ ನ.8ರಂದು ರಾತ್ರಿ 11 ಗಂಟೆಗೆ ಮಣಿಪಾಲ ಮಾಂಡವಿ ಎಮರಾಲ್ಡ್ ಅಪಾರ್ಟ್ಮೆಂಟ್ ಎದುರು ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಆರ್ಯನ್ ಕುಮಾರ್, ಆದಿತ್ಯ ಪ್ರಜಾಪತಿ, ಪ್ರಿಯಾಂಶ್, ಸಿದ್ದಾಂತ್ ಸಿಂಗ್, ಪ್ರಿಯಜಿತ್ ಸಿಂಗ್ ಸೇರಿದಂತೆ ಇತರ 15 ಮಂದಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಮಣಿಪಾಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಈ ವೇಳೆ ಸುಮಾರು 15ರಿಂದ 20 ಮಂದಿ ಗುಂಪುಗೂಡಿ ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿರುವುದು ಕಂಡುಬಂದಿದೆ. ಪಟಾಕಿಗಳನ್ನು ಕೈಯಲ್ಲಿ ಹಿಡಿದು ಹಚ್ಚಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು, ವಾಹನ ಸವಾರರು ಹಾಗೂ ವಾಹನಗಳ ಮೇಲೆ ಎಸೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಅನಿಲ್, ಕೀರ್ತಿ, ಡೆನಿಸ್ ರವಿಶೆಟ್ಟಿ ಹಾಗೂ ಜ್ಞಾನೇಶ್ವರ್ ಎಂಬವರು ತೊಂದರೆಗೊಳಗಾಗಿದ್ದು, ಘಟನೆಯ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ. ಅಲ್ಲದೆ, ಸಾರ್ವಜನಿಕ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಸೂಚನೆಗಳನ್ನು ಪಾಲಿಸದೆ ಅವರ ಮೇಲೆಯೂ ಪಟಾಕಿ ಎಸೆದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




