ಮಣಿಪಾಲ | ಫ್ಲ್ಯಾಟ್‌ನಲ್ಲಿ ಗಾಂಜಾ ಮಾರಾಟ : ಇಬ್ಬರು ವಿದ್ಯಾರ್ಥಿಗಳ ಬಂಧನ

ಮಣಿಪಾಲ, ನ.22: ಎರಡು ಅಪಾರ್ಟ್ಮೆಂಟ್ ಗಳಿಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು, ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಗುಜರಾತ್ ಮೂಲದ ಕುಶ್ ಕೆಯುಶ್ ಪಟೇಲ್(20) ಹಾಗೂ ಉತ್ತರ ಪ್ರದೇಶ ಮೂಲದ ದೇವಾಂಶ್ ತ್ಯಾಗಿ(22) ಬಂಧಿತ ಆರೋಪಿಗಳು. ಇವರಿಂದ ಸುಮಾರು 36 ಸಾವಿರ ರೂ. ಮೌಲ್ಯದ 727 ಗ್ರಾಂ ಗಾಂಜಾ ಹಾಗೂ 30 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಎಸ್ಸೈ ಅನಿಲ ಬಿ.ಎಂ. ಮತ್ತು ಸಿಬ್ಬಂದಿರವರನ್ನೊಳಗೊಂಡ ತಂಡ ನ.20ರಂದು ಸಂಜೆ ಮಣಿಪಾಲ ವಿದ್ಯಾರತ್ನ ನಗರದ ಅಪಾರ್ಟೆಂಟ್ ಗೆ ದಾಳಿ ನಡೆಸಿ, ಕುಶ್ ಕೆಯುಶ್ ಪಟೇಲ್ ನನ್ನು ವಶಕ್ಕೆ ಪಡೆದರು. ಬಳಿಕ ಆತ ನೀಡಿದ ಮಾಹಿತಿಯಂತೆ ದೇವಾಂಶ್ ತ್ಯಾಗಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಗಾಂಜಾವನ್ನು ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಅಪಾರ್ಟ್ಮೆಂಟ್ ಕೊಠಡಿಯಲ್ಲಿ ಶೇಖರಿಸಿ ಇಟ್ಟಿರುವುದು ತನಿಖೆಯಿಂದ ಕಂಡುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದಕ ವಸ್ತುಗಳನ್ನು ಮಣಿಪಾಲದಲ್ಲಿ ಮಾರಾಟ ಮಾಡುವ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದೆ. ಈ ಪ್ರಕರಣದ ವಿಚಾರಣೆ ಮುಂದುವರಿಸಲಾಗಿದ್ದು, ಮಣಿಪಾಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಹಲವಾರು ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿರುವುದು ಹಾಗೂ ಸೇವನೆ ಮಾಡಿರುವುದು ತಿಳಿದು ಬಂದಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.







