ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಮ್ಯಾಪಿಂಗ್ ಪ್ರಕ್ರಿಯೆ ಪ್ರಾರಂಭ: ಡಿಸಿ ಸ್ವರೂಪ ಟಿ.ಕೆ.

ಉಡುಪಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರನೂ ತಮ್ಮ ಹೆಸರು ಮ್ಯಾಪಿಂಗ್ ಆಗಿದೆಯೋ, ಇಲ್ಲವೋ ಎಂಬುದನ್ನು ತಮ್ಮ ಮತಗಟ್ಟೆಯ ಬಿಎಲ್‌ಓ ಅವರಿಂದ ಖಚಿತ ಪಡಿಸಿಕೊಳ್ಳ ಬಹುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಪ್ರತಿಯೊಬ್ಬ ಮತದಾರರು ತಮ್ಮ ತಮ್ಮ ಮತಗಟ್ಟೆಗಳ ಅಧಿಕಾರಿ (ಬಿಎಲ್‌ಓ) ಗಳನ್ನು ಭೇಟಿ ಮಾಡಿ, 2002ರ ಮತದಾನ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡಿಕೊಳ್ಳಬಹುದು ಎಂದ ಅವರು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡಿರುವವರು ಮತದಾರರ ಪಟ್ಟಿಗೆ ನಿಮ್ಮ ಮ್ಯಾಪಿಂಗ್ ಕಾರ್ಯವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನೀವು ಈ ಹಿಂದೆ ವಾಸವಿದ್ದಂತಹ ತಮ್ಮ ವಾಸದ ವಿಧಾನಸಭಾ ಕ್ಷೇತ್ರದ ಸಂಖ್ಯೆ ಹಾಗೂ ತಮ್ಮ ಕ್ರಮ ಸಂಖ್ಯೆಯನ್ನು ತಿಳಿದುಕೊಂಡು ಬಿಎಲ್‌ಓಗೆ ಮಾಹಿತಿ ನೀಡಬೇಕು ಎಂದವರು ವಿವರಿಸಿದರು.
ಜ.25ಕ್ಕೆ ರಾ.ಮತದಾರರ ದಿನ: ಚುನಾವಣಾ ಆಯೋಗದ ನಿರ್ದೇಶನ ದಂತೆ ಯುವ ಜನರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
16 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಇದೇ ಜನವರಿ 25ರಂದು ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಆಚರಿಸಲಾಗುವುದು. ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಉತ್ತೇಜಿಸಲು ಹಾಗೂ ಚುನಾವಣೆಯಲ್ಲಿ ಅನುಸರಿಸಲಾಗುವ ಪಾರದರ್ಶಕತೆ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತದಾನ ಕುರಿತು ಅರಿವು ಮೂಡಿಸುವ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು, ವಿಜೇತರುಗಳಿಗೆ ಕಾರ್ಯಕ್ರಮದ ದಿನದಂದು ಬಹುಮಾನ ವಿತರಿಸಲಾಗುವುದು. ಚುನಾವಣೆ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪ್ರತೀ ತಾಲೂಕಿಗೆ ಒಬ್ಬರಂತೆ ಬಿಎಲ್‌ಓರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.ಹೊಸದಾಗಿ ನೋಂದಣಿ ಯಾದ ಯುವ ಮತದಾರರಿಗೆ ಕಾರ್ಯಕ್ರಮ ದಿನದಂದು ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್) ವಿತರಿಸಲು ಕ್ರಮ ವಹಿಸಬೇಕು ಎಂದರು.
ಜನವರಿ 25 ಸಾರ್ವತ್ರಿಕ ರಜಾ ದಿನವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಜನವರಿ 23ರಂದು ಕಡ್ಡಾಯವಾಗಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿ ಸುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿ ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಡಿವೈಎಸ್ಪಿ ಪ್ರಭು ಡಿ.ಟಿ, ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ಚುನಾವಣಾ ತರಬೇತುದಾರ ಡಾ.ಅಶೋಕ್ ಕಾಮತ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.







