ಉಡುಪಿ | ಗಾಂಜಾ ಮಾರಾಟ ಪ್ರಕರಣ: ಒಡಿಶಾ ಮೂಲದ ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ
ಉಡುಪಿ: ಅಕ್ರಮ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಒಡಿಶಾ ಮೂಲದ ಇಬ್ಬರು ಆರೋಪಿಗಳಿಗೆ ಜೈಲುಶಿಕ್ಷೆ ವಿಧಿಸಿ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಒಡಿಶಾ ರಾಜ್ಯದ ದೇವಾಸಿಸ್ ಸೇತಿ(27) ಹಾಗೂ ಸನಾತನ ಪಾತ್ರ(32) ಶಿಕ್ಷೆಗೆ ಗುರಿಯಾದ ಆರೋಪಿಗಳು. 2018ರಲ್ಲಿ ಕಲ್ಯಾಣಪುರ ಸಂತೆಕಟ್ಟೆ ರಿಕ್ಷಾ ನಿಲ್ದಾಣದ ಹಿಂಬದಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಕಾರ್ಯಾಚರಣೆ ನಡೆಸಿ ಈ ಇಬ್ಬರು ಆರೋಪಿ ಗಳನ್ನು ಬಂಧಿಸಿ, 1.65 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಉಡುಪಿ ವೃತ್ತ ನಿರೀಕ್ಷಕರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್, ಆರೋಪಿಗಳನ್ನು ತಪ್ಪಿತಸ್ಥರು ಎಂದು ತಿರ್ಮಾನಿಸಿ, ಇಬ್ಬರಿಗೆ ತಲಾ 2 ವರ್ಷಗಳ ಕಠಿಣ ಸಜೆ ಮತ್ತು ತಲಾ 10,000ರೂ. ದಂಡ ವಿಧಿಸಿ ಆದೇಶ ನೀಡಿದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದಾರೆ.





