ಒನಕೆ ಓಬವ್ವ ಯುವ ಜನಾಂಗಕ್ಕೆ ಪ್ರೇರಣೆಯಾಗಲಿ: ಸಂಸದ ಕೋಟ

ಉಡುಪಿ, ನ.11: ಮುದ್ದ ಹನುಮ ಎಂಬ ಒಬ್ಬ ಸಾಮಾನ್ಯ ಕಾವಲುಗಾರನ ಹೆಂಡತಿ ಓಬವ್ವ ತನ್ನ ರಾಜ್ಯಕ್ಕೆ ಶತ್ರುಗಳಿಂದ ಗಂಡಾಂತರ ಉಂಟಾಗುವ ಸಂದರ್ಭ ಬಂದಾಗ ತನ್ನ ಪ್ರಾಣವನ್ನೂ ಲೆಕ್ಕಿಸದೆ ಮಾತೃಭೂಮಿ ಗಾಗಿ ಒನಕೆ ಹಿಡಿದು ಶತ್ರುಗಳನ್ನು ಸದೆಬಡಿದು ರಾಜ್ಯದ ರಕ್ಷಣೆ ಮಾಡುತ್ತಾಳೆ. ಅಂಥ ಒನಕೆ ಓಬವ್ವ ನಮ್ಮ ಇಂದಿನ ಯುವಜನತೆಗೆ, ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಣಿಪಾಲ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಒನಕೆ ಓಬವ್ವಳ ಅಪ್ರತಿಮ ಸಾಹಸಕ್ಕಾಗಿ ಇತಿಹಾಸಕಾರರು ಆಕೆಯನ್ನು ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕನಂತಹ ವೀರ-ಧೀರ ಮಹಿಳೆಯರ ಸಾಲಿನಲ್ಲಿ ನಿಲ್ಲಿಸುತ್ತಾರೆ. ತನಗಿಂತ ತನ್ನ ದೇಶ ಮೊದಲೆಂದು ಬದುಕಿದ ಇಂತಹ ವೀರವನಿತೆ ಓಬವ್ವನ ತ್ಯಾಗ, ದೇಶ ಪ್ರೇಮ, ಸ್ವಾಮಿನಿಷ್ಠೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕಿದೆ ಎಂದವರು ನುಡಿದರು.
ಒನಕೆ ಓಬವ್ವ ಆತ್ಮರಕ್ಷಣೆಯ ಪ್ರತೀಕ. ಹೆಣ್ಣುಮಕ್ಕಳು ತಮ್ಮ ಆತ್ಮ ರಕ್ಷಣೆಯ ಜೊತೆಗೆ ತನ್ನ ಪ್ರಾಂತ್ಯ, ರಾಜ್ಯ ಮತ್ತು ದೇಶಕ್ಕೋಸ್ಕರ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಾರೆ ಎನ್ನುವುದಕ್ಕೆ ಒನಕೆ ಓಬವ್ವ ಸಾಕ್ಷಿ. ಚಿತ್ರದುರ್ಗದ ಕಲ್ಲಿನ ಕೋಟೆ ಕಂಡಾಗಲೆಲ್ಲಾ ಓಬವ್ವನ ತ್ಯಾಗ, ಬಲಿದಾನ, ಸಮರ್ಪಣೆ ನೆನಪಾಗುತ್ತದೆ ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಕುತಂತ್ರದಿಂದ ಚಿತ್ರದುರ್ಗದ ಕೋಟೆಗೆ ಒಳನುಸುಳಿದ ಹೈದರಾಲಿಯ ಸೈನ್ಯದ ವಿರುದ್ಧ ದಿಟ್ಟತನದಿಂದ ಹೋರಾಡಿದ ವೀರವನಿತೆ ಒನಕೆ ಓಬವ್ವರ ಧೈರ್ಯ, ದೇಶಪ್ರೇಮ, ಸದಾ ಸ್ಮರಣೀಯ. ಜೊತೆಗೆ ಸ್ತ್ರೀಶಕ್ತಿಯ ಸಂಕೇತವಾಗಿ ಇಂದಿಗೂ ಮಹಿಳೆಯರಿಗೆ ಓಬವ್ವಳ ಹೋರಾಟದ ಮನೋಭಾವ ಸ್ಫೂರ್ತಿದಾಯಕ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಸಮಾಜಕ್ಕೆ ಮಹನೀಯರು, ಮಹಿಳೆಯರು ನೀಡಿದ ಕೊಡುಗೆ, ತ್ಯಾಗ, ಬಲಿದಾನ, ಸಾಧನೆಗಳ ಸಾರ್ಥಕ ಸೇವೆ ಗುರುತಿಸಿ ಜಯಂತಿ ಕಾರ್ಯಕ್ರಮವನ್ನು ಅಯೋಜಿಸಲಾಗುತ್ತಿದೆ. ಇಂದಿನ ಯುವ ಪೀಳಿಗೆಯು ಇವರ ಮಹತ್ವವನ್ನು ಅರಿತು ಅವರ ತತ್ವ ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದರು.
ಕುಂದಾಪುರದ ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೋವಾಡಿ ಒನಕೆ ಓಬವ್ವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಸುಬ್ರಮಣ್ಯ ಶೆಟ್ಟಿ, ಮಣಿಪಾಲ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಉಪಪ್ರಾಂಶುಪಾಲ ನಾಗೇಂದ್ರ ಪೈ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಹಿರಿಯ ಶಿಕ್ಷಕ ಸಚ್ಚಿದಾನಂದ ವಂದಿಸಿದರು.







