ಮುದ್ರಣ ಕ್ಷೇತ್ರದ ಜಿಎಸ್‌ಟಿ ನೂನ್ಯತೆ ಸರಪಡಿಸಲು ಸಚಿವರಿಗೆ ಮನವರಿಕೆ: ಸಿ.ಆರ್.ಜನಾರ್ದನ್

ಮಣಿಪಾಲ, ಡಿ.12: ಮುದ್ರಣ ಕ್ಷೇತ್ರಕ್ಕೆ ಶೇ.5ರಷ್ಟಿದ್ದ ಜಿಎಸ್ಟಿಯನ್ನು ಶೇ.18ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಪೇಪರ್ ಬೆಲೆ ಕೂಡ ಹೆಚ್ಚಳ ಆಗಿದ್ದು, ಮುದ್ರಣ ಕ್ಷೇತ್ರ ಸಾಕಷ್ಟು ನಷ್ಟ ಅನುಭವಿಸುತ್ತಿದೆ. ಈ ಸಂಬಂಧ ಮುದ್ರಣ ಮಾಲಕರ ಸಂಘದಿಂದ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಭೇಟಿ ಮಾಡಿ ಜಿಎಸ್ಟಿ ನೂನ್ಯತೆಗಳನ್ನು ಮನವರಿಕೆ ಮಾಡಲಾಗಿದೆ ಎಂದು ಅಖಿಲ ಭಾರತ ಮುದ್ರಣ ಮಾಲಕರ ಸಂಘದ ಮಾಜಿ ಅಧ್ಯಕ್ಷ, ಬೆಂಗಳೂರು ಪ್ರಿಂಟೆಕ್ ಪಾರ್ಕ್ ಕ್ಲಸ್ಟರ್ ಅಧ್ಯಕ್ಷ ಸಿ.ಆರ್.ಜನಾರ್ದನ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮುದ್ರಣ ಮಾಲಕರ ಸಂಘ, ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಮತ್ತು ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಇವುಗಳ ಸಹಯೋಗದಲ್ಲಿ ಮಣಿಪಾಲ ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್ ನಲ್ಲಿ ಎರಡು ದಿನಗಳ ಹಮ್ಮಿಕೊಳ್ಳಲಾದ ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್-2025ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದಲ್ಲಿರುವ ಮುದ್ರಣ ಸೇರಿದಂತೆ ಲಕ್ಷಾಂತರ ಸಣ್ಣ ಕೈಗಾರಿಕೆಗಳು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಿದೆ. ಸರಕಾರ ನೀಡುವ ಉದ್ಯೋಗಗಳಿಗಿಂತ ಹೆಚ್ಚಿನ ಉದ್ಯೋಗವನ್ನು ಈ ಕೈಗಾರಿಕೆಗಳು ನೀಡುತ್ತಿದೆ. ಆದರೆ ಇದೀಗ ಜಿಎಸ್ಟಿ ಹೆಸರಿನಲ್ಲಿ ಸಣ್ಣ ಕೈಗಾರಿಕೆಗಳಿಗೆ ತೊಂದರೆ ಕೊಡುವ ಕಾರ್ಯ ಮಾಡಲಾಗುತ್ತಿದೆ. ಸರಕಾರ ಜಿಎಸ್ಟಿ ಸಂಬಂಧಿಸಿದ ನೂನ್ಯತೆ ಗಳನ್ನು ಸರಿಪಡಸಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮವನ್ನು ಮಣಿಪಾಲ ಮೀಡಿಯಾ ನೆಟ್ವರ್ಕ್ ನ ಎಕ್ಸುಕಿಟಿವ್ ಚೇಯರ್ಮೆನ್ ಟಿ.ಸತೀಶ್ ಯು.ಪೈ ದೀಪ ಬೆಳಗಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮುದ್ರಣ ಮಾಲಕರ ಸಂಘದ ಅಧ್ಯಕ್ಷ ಬಿ.ಆರ್.ಅಶೋಕ್ ಕುಮಾರ್ ವಹಿಸಿದ್ದರು.
ಮಣಿಪಾಲ ಎಂಎಸ್ಡಿಸಿಯ ಚೇಯರ್ಮೆನ್ ಬ್ರೀ.ಡಾ.ಸುರ್ಜಿತ್ ಸಿಂಗ್ ಪಾಬ್ಲಾ, ದಕ್ಷಿಣ ಎಐಎಫ್ಎಂಪಿ ಉಪಾಧ್ಯಕ್ಷ ಮುಜೀಬ್ ಕೆ.ಎ., ಜತೆ ಕಾರ್ಯದರ್ಶಿ ಪಿ.ವಿ.ಸತೀಶ್ ಕುಮಾರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಪಾಲಿಟೆಕ್ನಿಕ್ನ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥೆ ರಜನಿ, ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಅಧ್ಯಕ್ಷ ಸತೀಶ್ ನಾಯಕ್, ಮಾಜಿ ಅಧ್ಯಕ್ಷ ಯು.ಮೋಹನ ಉಪಾಧ್ಯ, ಪ್ರಮುಖರಾದ ಪ್ರಕಾಶ್ ಬಾಬು, ಮಹೇಶ್ ಕುಮಾರ್, ಎ.ಎಂ.ಪ್ರಕಾಶ್ ಉಪಸ್ಥಿತರಿದ್ದರು.
ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿಯ ಸಂಚಾಲಕ ಎಂ.ಮಹೇಶ್ ಕುಮಾರ್ ಸ್ವಾಗತಿಸಿದರು. ಸಹಸಂಚಾಲಕ ಅಶೋಕ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಕಾರ್ಯದರ್ಶಿ ಅಂಶಮನ್ ಜೋಷಿ ವಂದಿಸಿದರು. ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.







