ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿ ಮಾರಾಟದಲ್ಲಿ ಕೋಟ್ಯಾಂತರ ರೂ. ವಂಚನೆ: ತನಿಖೆಗೆ ನ್ಯಾಯಾಲಯ ಆದೇಶ

ಉಡುಪಿ, ಅ.24: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದ್ದ ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಇಲ್ಲಿನ ಗುಜರಿ ಮಾರಾಟದಲ್ಲಿ 14 ಕೋಟಿ ರೂ.ಗೂ ಮಿಕ್ಕಿ ವಂಚನೆ ಮಾಡಿರುವ ಬಿಜೆಪಿ ಬೆಂಬಲಿತ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಕೋರಿ ಉಡುಪಿ ಜಿಲ್ಲಾ ರೈತ ಸಂಘ ನೀಡಿದ ಖಾಸಗಿ ದೂರನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಜೆಎಂಎಫ್‌ಸಿ ಉಡುಪಿ ದಾಖಲಿಸಿಕೊಂಡಿದ್ದಾರೆ.
ಈ ದೂರಿನ ವಿಚಾರಣೆ ನಡೆಸಿದ ನ್ಯಾಯಧೀಶರು ಈ ದೂರಿನ ಕುರಿತು ಸೂಕ್ತ ತನಿಖೆ ನಡೆಸಿ ಮುಂದಿನ ಡಿಸೆಂಬರ್ 12ರೊಳಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಪಿಎಸ್‌ಐ ಅವರಿಗೆ ಅ.21ರಂದು ಆದೇಶ ಮಾಡಿದ್ದಾರೆ.
ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿ ಅವರು ಸಂಘದ ಪರವಾಗಿ ದೂರು ದಾಖಲಿ ಸಿದ್ದು, ಪ್ರತಿವಾದಿಗಳಾಗಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರವೀಣ್, ಲಕ್ಷ್ಮೀನಾರಾಯಣ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಸೇರಿದಂತೆ 24 ಮಂದಿಯನ್ನು ಹೆಸರಿಸಲಾಗಿದೆ. ಇದರಲ್ಲಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಸದ್ಯ ಅಲ್ಲಿ ದುಡಿಯುತ್ತಿ ರುವ ನೌಕರರು ಸೇರಿದ್ದಾರೆ.
ವಿಚಾರಣೆಯ ವೇಳೆ ಈ ಪ್ರಕರಣದ ಕುರಿತು ನ್ಯಾಯವಾದಿ ಆರ್. ಜಗನಾಥ್ ಇವರು ರೈತ ಸಂಘದ ಪರವಾಗಿ ವಾದ ಮಂಡಿಸಿದ್ದರು.
ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಕ್ಕರೆ ಕಾರ್ಖಾನೆಯ ಹೊಸ ಆಡಳಿತ ಮಂಡಳಿ ಕಾರ್ಖಾನೆಯ ಗುಜರಿ ಮಾರಾಟದ ನೆಪದಲ್ಲಿ 14 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ನಡೆಸಿದ್ದು, ಕಾರ್ಖಾನೆಯ ತಳಪಾಯವನ್ನು ಕಿತ್ತು ಕಲ್ಲನ್ನು ಸಹ ಮಾರಾಟ ಮಾಡಿದೆ ಎಂದು ಜಿಲ್ಲಾ ರೈತ ಸಂಘ ಆರೋಪಿಸಿತ್ತು.
ಈ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಇತ್ತೀಚಿಗೆ ಬ್ರಹ್ಮಾವರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕರಾವಳಿ ಮಲೆನಾಡು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೊಳ್ಳಿ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ನಡೆಸಿ ಅವ್ಯವಹಾರ, ಅಕ್ರಮ ಹಾಗೂ ಭ್ರಷ್ಟಾಚಾರವನ್ನು ತೀವ್ರವಾಗಿ ಖಂಡಿಸಿ, ಇದರ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.







