ಗಂಗೊಳ್ಳಿ ಅಗ್ನಿ ದುರಂತ ಪ್ರದೇಶಕ್ಕೆ ಸಚಿವೆ ಹೆಬ್ಬಾಳ್ಕರ್ ಭೇಟಿ, ಪರಿಶೀಲನೆ

ಗಂಗೊಳ್ಳಿ (ಕುಂದಾಪುರ): ಗಂಗೊಳ್ಳಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕೋಟ್ಯಂತರ ರೂ. ಮೌಲ್ಯದ ಮೀನುಗಾರಿಕಾ ಬೋಟುಗಳು ಸೇರಿದಂತೆ ಅಪಾರ ಸೊತ್ತು ನಾಶವಾದ ಮ್ಯಾಂಗನೀಸ್ ವಾರ್ಫ್ ಪ್ರದೇಶಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಭೇಟಿ ನೀಡಿದರು.
ಅಗ್ನಿ ಆಕಸ್ಮಿಕದಿಂದ ಸುಟ್ಟು ಕರಕಲಾದ ಮೀನುಗಾರಿಕಾ ಬೋಟುಗಳು, ದೋಣಿ, ಡಿಂಗಿ ಬೋಟುಗಳ ಅವಶೇಷಗಳು, ದುರಂತದಿಂದ ಆದ ಹಾನಿಯ ಪ್ರಮಾಣವನ್ನು, ದುರಂತಕ್ಕೆ ಸಾಕ್ಷಿಯಾಗಿ ಉಳಿದಿರುವ ಪರಿಸರವನ್ನು ಸಚಿವೆ ವೀಕ್ಷಿಸಿದರು. ಸ್ಥಳದಲ್ಲಿದ್ದ ಮೀನುಗಾರರು ಹಾಗೂ ಬೋಟ್ ಕಳೆದುಕೊಂಡ ಮಾಲಕರಿಗೆ ಅವರು ಸ್ವಾಂತನ ಹೇಳಿದರು.
ಸ್ಥಳ ಪರಿಶೀಲನೆಯ ಬಳಿಕ ಜೊತೆಯಲ್ಲಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮೀನುಗಾರರು ಹಾಗೂ ದುರಂತದಿಂದ ಸಂತ್ರಸ್ಥರು ಮತ್ತವರ ಕುಟುಂಬದವರೊಂದಿಗೆ ಚರ್ಚೆ ನಡೆಸಿದರು.
ತಮ್ಮ ಹಾಗೂ ತಮ್ಮ ಕುಟುಂಬದ ಬದುಕಿಗೆ ಆಸರೆಯಾಗಿದ್ದ ಬೋಟುಗಳು ಸಂಪೂರ್ಣ ಸುಟ್ಟು ಕರಕಲಾಗಿರುವುದರಿಂದ ನೊಂದಿರುವ ನೂರಾರು ಮೀನುಗಾರರ ಕುಟುಂಬಗಳು ತಕ್ಷಣ ಪರಿಹಾರ ನೀಡುವಂತೆ ಸಚಿವರನ್ನು ಕೋರಿಕೊಂಡರು.
ಇದರೊಂದಿಗೆ ದೊಡ್ಡ ಮಟ್ಟದ ಅಗ್ನಿ ದುರಂತದಿಂದ ದಿಗ್ಫ್ರಮೆಗೊಂಡಿರುವ ಈ ಪ್ರದೇಶದ 20ಕ್ಕೂ ಅಧಿಕ ಮಹಿಳಾ ನಿವಾಸಿಗಳು ಸಹ ಪ್ರತ್ಯೇಕವಾಗಿ ಸಚಿವರನ್ನು ಭೇಟಿಯಾಗಿ, ತಮ್ಮ ಬದುಕಿನ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳುವಂತೆ ಸಚಿವರನ್ನು ಒತ್ತಾಯಿಸಿದರು.
ನ.13ರ ಅಗ್ನಿ ದುರಂತ ಬೆಳಗಿನ ಹೊತ್ತು ನಡೆಯದೇ ರಾತ್ರಿಯೇನಾದರೂ ಸಂಭವಿಸಿದ್ದರೆ, ಬೆಂಕಿನ ಖಂಡಿತವಾಗಿ ತಮ್ಮ ಮನೆಗಳಿರುವ ಪ್ರದೇಶಗಳಿಗೂ ಮುನ್ನುಗುತ್ತಿತ್ತು. ಇದರಿಂದ ಹತ್ತಾರು ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇತ್ತು ಎಂದು ಮಹಿಳೆಯರು ಸಚಿವರ ಮುಂದೆ ಭೀತಿ ವ್ಯಕ್ತಪಡಿಸಿದರು.
ದುರಂತದ ಬಳಿಕ ಆಸುಪಾಸಿನ ಮನೆಯ ಹಿರಿಯರಿಗೆ, ಮಕ್ಕಳಿಗೆ ಹಾಗೂ ನಮಗೆ ಇಲ್ಲಿ ಇರಲು ಹೆದರಿಕೆಯಾಗುತ್ತಿದೆ ಎಂದವರು ಅವಲತ್ತು ಕೊಂಡರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪ್‌ೋ ವರಿಷ್ಠಾಧಿಕಾರಿ ಡಾ.ಅರುಣ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಮಾಜಿ ಶಾಸಕ ಗೋಪಾಲ ಪೂಜಾರಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ರಾಜು ಪೂಜಾರಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.







