ಬ್ರಹ್ಮಾವರ ಪೊಲೀಸರ ಕಾರ್ಯಾಚರಣೆ; ನಾಪತ್ತೆಯಾಗಿದ್ದ ಹಾಸ್ಟೆಲ್ ವಿದ್ಯಾರ್ಥಿನಿಯರು ಕೆಲವೇ ಗಂಟೆಗಳಲ್ಲಿ ಪತ್ತೆ

ಸಾಂದರ್ಭಿಕ ಚಿತ್ರ
ಬ್ರಹ್ಮಾವರ: ಬ್ರಹ್ಮಾವರ ಹಿಂದುಳಿದ ವರ್ಗ ಹಾಸ್ಟೆಲ್ನಿಂದ ನಾಪತ್ತೆಯಾಗಿರುವ ಮೂವರು ವಿದ್ಯಾರ್ಥಿನಿಯರನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚುವಲ್ಲಿ ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿದ್ದಾರೆ.
ರಜೆಯ ಹಿನ್ನೆಲೆಯಲ್ಲಿ ಹಾಸ್ಟೆಲ್ನಲ್ಲಿದ್ದ 6, 7, 8ನೇ ತರಗತಿಯ ವಿದ್ಯಾರ್ಥಿನಿಯರು ಶನಿವಾರ ಸಂಜೆ 4ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದರು. ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದು, ಅದರಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಅಶೋಕ್ ಮಳಬಗಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ನಾಪತ್ತೆಯಾಗಿದ್ದ ಮಕ್ಕಳನ್ನು ರಾತ್ರಿ 8ಗಂಟೆ ಸುಮಾರಿಗೆ ಮಂಗಳೂರು ಬಿ.ಸಿ.ರೋಡ್ ಬಳಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಕರ್ನಾಟಕ ಮೂಲದ ಈ ಮೂವರು ಬೆಂಗಳೂರು ಕಡೆ ಹೋಗುವ ಬಸ್ ಹತ್ತಿದ್ದರೆನ್ನಲಾಗಿದೆ. ಇದೀಗ ಮಕ್ಕಳನ್ನು ವಾಪಾಸ್ಸು ಬ್ರಹ್ಮಾವರಕ್ಕೆ ಕರೆದುಕೊಂಡು ಬರಲಾಗುತ್ತಿದೆ ಎನ್ನಲಾಗಿದೆ. ಈ ಮೂವರು ಬ್ರಹ್ಮಾವರ ಬೋರ್ಡ್ ಹೈಸ್ಕೂಲ್ನ ವಿದ್ಯಾರ್ಥಿಗಳಾಗಿದ್ದಾರೆ. ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.





