ರಾಹುಲ್ ಗಾಂಧಿ ವಿರುದ್ಧ ದ್ವೇಷಭಾಷಣ ಪ್ರಕರಣ | ಶಾಸಕ ಯಶ್‌ಪಾಲ್ ಸುವರ್ಣ ಕಚೇರಿಗೆ ಮುತ್ತಿಗೆ ಯತ್ನ: ಯುವ ಕಾಂಗ್ರೆಸ್ ಮುಖಂಡರು ಪೊಲೀಸರ ವಶಕ್ಕೆ

ಉಡುಪಿ : ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ದ್ವೇಷಭಾಷಣ ಮಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಕಚೇರಿಗೆ ಗುರುವಾರ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಪ್ರತಿಭಟನೆ ಹಾಗೂ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ನಗರದ ಜೋಡುಕಟ್ಟೆ ಹಾಗೂ ಶಾಸಕ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಮಧ್ಯೆ ಶಾಸಕ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಕೂಡ ಜಮಾಯಿಸಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಜೋಡುಕಟ್ಟೆ ಆಗಮಿಸಿದ ಯುವ ಕಾಂಗ್ರೆಸ್ ಮುಖಂಡರು, ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಯುವ ಕಾಂಗ್ರೆಸ್ ಮುಖಂಡರನ್ನು ತಡೆದು ವಶಕ್ಕೆ ಪಡೆದುಕೊಂಡರು. ಇತ್ತ ಶಾಸಕರ ಕಚೇರಿಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಕೂಡ ಘೋಷಣೆಗಳನ್ನು ಕೂಗಿದರು.




