ಪ್ರಧಾನಿಯಾಗಿ ಮೊದಲ ಬಾರಿ ಕೃಷ್ಣ ಮಠಕ್ಕೆ ಆಗಮಿಸುತ್ತಿರುವ ಮೋದಿ

ಪ್ರಧಾನಿ ನರೇಂದ್ರ ಮೋದಿ (File Photo: PTI)
ಉಡುಪಿ: ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನ.28ರಂದು (ನಾಳೆ) ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮೊದಲ ಬಾರಿಗೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ. ಪ್ರಧಾನಿಯವರ ಸ್ವಾಗತಕ್ಕೆ ಉಡುಪಿ ನಗರವನ್ನು ಅಲಂಕೃತಗೊಳಿಸಲಾಗಿದೆ.
ಗುಜರಾತ್ನ ಮುಖ್ಯಮಂತ್ರಿಯಾಗಿ ಎರಡು ಬಾರಿ ಚುನಾವಣಾ ಪ್ರಚಾರಕ್ಕೆ ಉಡುಪಿಗೆ ಆಗಮಿಸಿದ್ದ ನರೇಂದ್ರ ಮೋದಿ ಅವರು (2004 ಮತ್ತು 2008), ಪ್ರಧಾನಿಯಾದ ಬಳಿಕ ಎರಡನೇ ಬಾರಿ ನಾಳೆ ಉಡುಪಿಗೆ ಬರಲಿದ್ದಾರೆ. 2018ರಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಅವರು ಎಂಜಿಎಂ ಕಾಲೇಜು ಮೈದಾನದಲ್ಲಿ ಪ್ರಚಾರ ಭಾಷಣ ಮಾಡಿ ಕೃಷ್ಣ ಮಠಕ್ಕೆ ಆಗಮಿಸದೇ ತೆರಳಿದ್ದರು. ಹೀಗಾಗಿ ಪ್ರಧಾನಿಯಾಗಿ ಅವರು ಮೊದಲ ಬಾರಿ ಕೃಷ್ಣ ಮಠಕ್ಕೆ ಆಗಮಿಸುತ್ತಿದ್ದಾರೆ.
ನಾಳೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಬಂದು ಅಲ್ಲಿಂದ 11:35ಕ್ಕೆ ಆದಿಉಡುಪಿಯಲ್ಲಿರುವ ಹೆಲಿಪ್ಯಾಡ್ಗೆ ಆಗಮಿಸಬೇಕಾಗಿದ್ದ ಪ್ರಧಾನಿ ಅವರ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದ್ದು, 11:00ಗಂಟೆಗೆ ಉಡುಪಿಗೆ ಬಂದು 11:30ಕ್ಕೆ ಕೃಷ್ಣ ಮಠಕ್ಕೆ ಆಗಮಿಸಿ, ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಪರಾಹ್ನ 1:00ಗಂಟೆಗೆ ಉಡುಪಿಯಿಂದ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ಗೋವಾದ ಕಾಣಕೋಣದಲ್ಲಿ ನಡೆಯುವ ಪರ್ತಗಾಳಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿಯವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಉಡುಪಿ ನಗರ ಪೊಲೀಸರ ಭದ್ರಕೋಟೆಯಂತೆ ಕಾಣಿಸುತ್ತಿದೆ. ನಗರದ ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರೇ ಕಂಡುಬರುತಿದ್ದಾರೆ. ಪೊಲೀಸ್ ವಾಹನಗಳು ನಗರದೆಲ್ಲೆಡೆಗಳಲ್ಲಿ ಸಂಚರಿಸುತ್ತಿದೆ. ಪೊಲೀಸರು, ಪ್ರಧಾನಿಯವರ ಭದ್ರತೆಗೆ ಬಂದಿರುವ ವಿಶೇಷ ಭದ್ರತಾ ಪಡೆ (ಎಸ್ಪಿಜಿ) ಹಾಗೂ ಇತರ ಭದ್ರತಾ ಸಿಬ್ಬಂದಿಗಳ ಉಪಸ್ಥಿತಿಯ ಬಿಸಿ ನಗರವಾಸಿಗಳಿಗೆ ಈಗಾಗಲೇ ತಟ್ಟಿದೆ.
ಶುಕ್ರವಾರ ಬೆಳಗ್ಗೆ 7ಗಂಟೆಯ ಬಳಿಕ ಉಡುಪಿ ನಗರದೊಳಗೆ ಬಸ್ಸು, ಕಾರು ಸೇರಿದಂತೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿರುವುದರಿಂದ ನಾಳೆ ಇದರ ಕಾರ್ಯಕ್ರಮದಲ್ಲಿ ಭಾಗವಹಿಸಲು ದೂರದೂರುಗಳಿಂದ ಆಗಮಿಸುವವರು ಕನಿಷ್ಠ 4-5ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಬೇಕಿದೆ.
ಬನ್ನಂಜೆಯ ನಾರಾಯಣಗುರು ವೃತ್ತದಿಂದ ಕಲ್ಸಂಕದವರೆಗೆ ಪ್ರಧಾನಿ ಅವರು ರೋಡ್ ಶೋ ನಡೆಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಈಗಾಗಲೇ ಘೋಷಿಸಿದ್ದು, 30,000ಕ್ಕೂ ಅಧಿಕ ಕಾರ್ಯಕರ್ತರು ಇದಕ್ಕಾಗಿ ಉಡುಪಿಗೆ ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ. ರೋಡ್ ಶೋ ನಡೆಯುವ ಬಗ್ಗೆ ಇನ್ನೂ ಸ್ಪಷ್ಟ ಚಿತ್ರ ಸಿಕ್ಕಿಲ್ಲ.
ಸಮಾವೇಶ ನಡೆಯುವ ಮಠದ ಪಾರ್ಕಿಂಗ್ ಪ್ರದೇಶ, ಹೆಲಿಪ್ಯಾಡ್ನಿಂದ ಅವರು ಸಾಗುವ ದಾರಿಯುದ್ದಕ್ಕೂ ಎಲ್ಲಾ ರೀತಿಯ ಅಲಂಕಾರ, ವ್ಯವಸ್ಥೆಗಳನ್ನು ಮಾಡಲಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದ 3000ಕ್ಕೂ ಅಧಿಕ ಪೊಲೀಸರು ಭದ್ರತೆಗಾಗಿ ನಗರದ ಆಯಕಟ್ಟಿ ಜಾಗಗಳಲ್ಲಿ ನಿಂತಿದ್ದು, ಹೋಗಿ ಬರುವವರ ಮೇಲೆ ಹದ್ದಿನ ಕಣ್ಣಿದ್ದಾರೆ.
ನಾಳೆ ಬೆಳಗ್ಗೆಯಿಂದ ಪ್ರಧಾನಿ ನಿರ್ಗಮಿಸುವವರೆಗೆ ಕೃಷ್ಣ ಮಠಕ್ಕೆ ಹಾಗೂ ರಥಬೀದಿಗೆ ಭಕ್ತರು ಸೇರಿದಂತೆ ಯಾರಿಗೂ ಪ್ರವೇಶವಿರುವುದಿಲ್ಲ.







