ಮುದರಂಗಡಿ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ : ಕೃತ್ಯಕ್ಕೆ ಹಣಕಾಸು ಪೂರೈಸಿದ ಪ್ರಮುಖ ಇಬ್ಬರು ಆರೋಪಿಗಳ ಬಂಧನ

ಉಡುಪಿ, ಆ.15: ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೇರಿದೆ.
ಬಡಾ ಎರ್ಮಾಳ್ ಗ್ರಾಮದ ಅದಮಾರು ಮಠದ ಬಳಿ ನಿವಾಸಿ ಸದಾನಂದ ದೇವಾಡಿಗ(41) ಹಾಗೂ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಬಳಿ ನಿವಾಸಿ ಕಿಶೋರ್ ರಾಮ ಪೂಜಾರಿ(47) ಬಂಧಿತ ಆರೋಪಿಗಳು.
ಆ.7ರಂದು ನಡೆದ ಕೃತ್ಯಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು, ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಆರೋಪಿಗಳಾದ ರಾಜು, ಅನ್ಮೋಲ್ ರಸ್ತೋಗಿ ಮತ್ತು ಜಿಯಾಹುಲ್ ಶೇಖ್ ಎಂಬವರನ್ನು ಬಂಧಿಸಿದ್ದರು. ಅದರಲ್ಲಿ ಅನ್ಮೋಲ್ ರಸ್ತೋಗಿ ಮತ್ತು ಜಿಯಾಹುಲ್ ಶೇಖ್ ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಯಿತು.
ಆರೋಪಿಗಳ ಬ್ಯಾಂಕ್ ಖಾತೆ ವಿವರ ಪಡೆದು ಪರಿಶೀಲಿಸಿದಾಗ ಈ ಪ್ರಕರಣದಲ್ಲಿ ಆರೋಪಿಗಳಿಗೆ ಮೊಹಮ್ಮದ್ ಇರ್ಷಾದ್ ಹಾಗೂ ಚಿರಾಗ್ ಪೂಜಾರಿ ಎಂಬವರು ಹಣ ಜಮಾ ಮಾಡಿ ಆರೋಪಿಗಳು ಕೃತ್ಯಕ್ಕೆ ಸಹಕರಿಸಿರುವುದು ತಿಳಿದುಬಂದಿತ್ತು. ಅದರಂತೆ ಇರ್ಷಾದ್ ಮತ್ತು ಚಿರಾಗ್‌ನನ್ನು ಪೊಲೀಸರು ಬಂಧಿಸಿದ್ದರು.
ನಂತರ ಈ ಎಲ್ಲಾ ಆರೋಪಿಗಳ ಬ್ಯಾಂಕ್ ಖಾತೆ ವಿವರ ಪಡೆದು ಪರಿಶೀಲಿಸಿ, ಮೊಬೈಲ್ ಹಾಗೂ ಕರೆ ವಿವರಗಳನ್ನು ವಿಶ್ಲೇಷಣೆಗೊಳ ಪಡಿಸಿದ್ದು, ಅದೇ ರೀತಿ ಆರೋಪಿಗಳ ಚಲನವಲನಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಈ ಪ್ರಕರಣದಲ್ಲಿ ಕೊಲೆಗೆ ಅಪರಾಧಿಕ ಒಳಸಂಚು ಮಾಡಿ ಈ ಕೃತ್ಯ ಮಾಡಲು ಹಣಕಾಸು ಪೂರೈಕೆ ಮಾಡಿರುವುದು ಸದಾನಂದ ದೇವಾಡಿಗ ಹಾಗೂ ಕಿಶೋರ್ ಪೂಜಾರಿ ಎಂಬುದು ತಿಳಿದುಬಂದಿದೆ.
ಅದರಂತೆ ಇವರಿಬ್ಬರನ್ನು ಬಂಧಿಸಿದ್ದು, ಇವರಲ್ಲಿ ಸದಾನಂದನಿಂದ ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ಫೋನ್, ಒಂದು ಬೈಕ್ ಹಾಗೂ ನಗದು ಅದೇ ರೀತಿ ಆರೋಪಿ ಕಿಶೋರ್ ಪೂಜಾರಿಯಿಂದ ಕೃತ್ಯಕ್ಕೆ ಬಳಸಿದ ಮೂರು ಮೊಬೈಲ್ ಫೋನ್, ಒಂದು ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿನ ನೇರವಾಗಿ ಭಾಗಿಯಾದ ಆರೋಪಿ ರಾಜು ಬಂಧನದ ವೇಳೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಕಾರಿ ನೌಕರರ ಮೇಲೆ ಕೊಲೆ ಯತ್ನ ಪ್ರಕರಣದಲ್ಲಿ ಗಾಯಗೊಂಡಿದ್ದು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಈತನನ್ನು ಆಸ್ಪತ್ರೆಯಿಂದ ಬಿಡುಗಡೆ ಗೊಂಡ ಬಳಿಕ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.






