ಮುದ್ರಾಡಿ: ಅ.15ರಿಂದ ಚಿಣ್ಣರ ಯಕ್ಷಾಂಗಣ
ಉಡುಪಿ, ಅ.13: ಮುದ್ರಾಡಿ ನಾಟ್ಕದೂರಿನ ನಮ ತುಳುವೆರ್ ಕಲಾಸಂಘಟನೆಯ 23ನೇ ವರ್ಷದ ನವರಂಗೋತ್ಸವ ಹಾಗೂ ನಾಟ್ಕ ಮುದ್ರಾಡಿಯ 38ನೇ ವರ್ಷದ ಸಂಭ್ರಮದಂಗವಾಗಿ ಚಿಣ್ಣರ ಯಕ್ಷಾಂಗಣ ಅ.15ರಿಂದ 24ರವರೆಗೆ ನಾಟ್ಕದೂರಿನ ಬಿ.ವಿ.ಕಾರಂತ ಬಯಲು ರಂಗಸ್ಥಳ ದಲ್ಲಿ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಮುದ್ರಾಡಿ ಹಾಗೂ ಆಸುಪಾಸಿನ ಪ್ರಾಥ ಮಿಕ ಶಾಲಾ ಮಕ್ಕಳಿಂದ ಪಠ್ಯಾಧಾರಿತ ಯಕ್ಷಗಾನ ತಾಳಮದ್ದಲೆ ಸ್ಪರ್ಧೆ ‘ಚಿಣ್ಣರ ಯಕ್ಷಾಂಗಣ’ ಅ.15ರಿಂದ 24ರವರೆಗೆ ನಡೆಯಲಿದೆ ಎಂದರು.
ಶಾಲಾ ಮಕ್ಕಳ ಯಕ್ಷಗಾನ ತಾಳಮದ್ದಲೆ ಸ್ಪರ್ಧೆಯ ಉದ್ಘಾಟನೆ ಅ.15ರ ರವಿವಾರ ಸಂಜೆ 7:00ಗಂಟೆಗೆ ನಡೆಯಲಿದ್ದು, ಮುಂಬಯಿಯ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಇದನ್ನು ಉದ್ಘಾಟಿಸಲಿದ್ದಾರೆ ಕಾರ್ಕಳ ಶಾಸಕ ಕೆ. ಸುನಿಲ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾರ್ಕಳದ ವಾಸ್ತುತಜ್ಞ ಪ್ರಮಲ್ ಕುಮಾರ್, ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ, ಸದಸ್ಯ ಗಣಪತಿ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ಅಭಿಮತ ಚಾನೆಲ್‌ನ ನಿರ್ದೇಶಕಿ ಮಮತಾ ಪಿ.ಶೆಟ್ಟಿ, ಉಡುಪಿಯ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಬೆಳಗಾವಿಯ ರವಿ ಕೋಟಾರಗಸ್ತಿ, ಪತ್ರಕರ್ತ ಡಾ.ಸರಜೂ ಕಾಟ್ಕರ್, ಬಜಗೋಳಿಯ ಹರೀಶ್ ಡಿ. ಸಾಲಿಯಾನ್, ಪ್ರಸಾದ್ ಆಚಾರ್ಯ ಹಾಗೂ ಮುಂಬಯಿಯ ಸುಂದರ್ ಕರ್ಮಾರ್ ಇವರಿಗೆ ಕರ್ಣಾಟ ನಾಡ ಪೋಷಕ, ಪೋಷಕಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
15ರಂದು ನಮ ತುಳುವೆರ್ ಕಲಾ ಸಂಘಟನೆ ‘ಅಭಿಮನ್ಯು ಪರಾಕ್ರಮ’ ಎಂಬ ತಾಳಮದ್ದಲೆಯನ್ನು ನಡೆಸಲಿದೆ. ಬಳಿಕ 16ರಿಂದ 22ರವರೆಗೆ ಒಂದು ವಾರ ಕಾಲ ನಡೆಯುವ ತಾಳಮದ್ದಲೆ ಸ್ಪರ್ಧೆಯಲ್ಲಿ ವರಂಗ, ಬಲ್ಲಾಡಿ, ಕಬ್ಬಿನಾಲೆ, ತುಂಡು ಗುಡ್ಡೆ, ಉಪ್ಪಳ, ಕೊಂಕಣಾರಬೆಟ್ಟು ಹಾಗೂ ಮುದ್ರಾಡಿ ಪ್ರಾಥಮಿಕ ಶಾಲಾ ತಂಡಗಳು ಭಾಗವಹಿಸಲಿವೆ.
23ನೇ ವರ್ಷದ ನವರಂಗೋತ್ಸವ ಹಾಗೂ ಚಿಣ್ಣರ ಯಕ್ಷಾಂಗಣದ ಸಮಾರೋಪ ಸಮಾರಂಭ 23ರಂದು ಸಂಜೆ 7 ಗಂಟೆಗೆ ನಡೆಯಲಿದ್ದು, ಪ್ರಮೋದ್ ಮಧ್ವರಾಜ್, ರಾಮ್‌ಶೆಟ್ಟಿ ಹಾರಾಡಿ, ಶೇಖರ ಅಜೆಕಾರು, ಇಂದಿರಾ ಬಾಯರಿ ಪಾಲ್ಗೊ ಳ್ಳುವರು. ಅದು ಅಜೆಕಾರಿನ ಪ್ರಥ್ವಿನ್ ಕೆ. ಇವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂದು ಸಾಣೂರು ಅಂಬಾ ಯಕ್ಷಸಭಾದಿಂದ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವಿದೆ ಎಂದು ಸುಕುಮಾರ್ ಮೋಹನ್ ತಿಳಿಸಿದರು.
ದಸರಾ ಮಹೋತ್ಸವ: ಅಲ್ಲದೇ ಶ್ರೀಕ್ಷೇತ್ರ ಮುದ್ರಾಡಿಯಲ್ಲಿ ಅ.14ರಿಂದ 25ರವರೆಗೆ 52ನೇ ವರ್ಷದ ದಸರಾ ಮಹೋ ತ್ಸವ, ದುರ್ಗಾಹೋಮ ಹಾಗೂ ಚಂಡಿಕಾ ಹೋಮ ನಡೆಯಲಿದೆ. ಸುಕುಮಾರ್ ಮೋಹನ್ ಎರಡನೇ ವರ್ಷದ ಪಟ್ಟಾಭಿ ಷೇಕ ವರ್ಧಂತ್ಯುತ್ಸವ ಅ.15ರಂದು ನಡೆಯಲಿದೆ. ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಉಮೇಶ್ ಕಲ್ಮಾಡಿ, ಸುರೇಂದ್ರ ಮೋಹನ್, ಸದಾಶಿವ ಪೂಜಾರಿ ಬಜಗೋಳಿ ಹಾಗೂ ಸುದೀಂದ್ರ ಮೋಹನ್ ಉಪಸ್ಥಿತರಿದ್ದರು.







