ಗಣತಿ ವೇಳೆ ಮುಸ್ಲಿಮರು ವೃತ್ತಿ ಆಧಾರಿತ ವರ್ಗ/ಪಂಗಡ ನಮೂದಿಸಿ: ಉಡುಪಿ ಸಂಯುಕ್ತ ಖಾಝಿ ಮಾಣಿ ಉಸ್ತಾದ್

ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ
ಉಡುಪಿ : ಜಾತಿ ಗಣತಿಗೆ ಸಂಬಂಧಿಸಿದಂತೆ ಸಮುದಾಯದಲ್ಲಿ ಉಂಟಾಗಿರುವ ಗೊಂದಲಗಳಿಗೆ ಸುನ್ನೀ ಜಮ್’ಇಯ್ಯತುಲ್ ಉಲಮಾ ಕರ್ನಾಟಕದ ಅಧ್ಯಕ್ಷ ಖಾಝಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ಸ್ಪಷ್ಟನೆ ನೀಡಿದ್ದಾರೆ.
ಮುಸ್ಲಿಮರಲ್ಲಿ ಜಾತಿ–ಉಪಜಾತಿಗಳಿಲ್ಲದಿದ್ದರೂ, ವೃತ್ತಿ ಆಧಾರಿತ ವರ್ಗಗಳನ್ನು ಗುರುತಿಸುವುದು ಮೀಸಲಾತಿ ಸವಲತ್ತು ಪಡೆಯಲು ಅಗತ್ಯವೆಂದು ಹೇಳಿದ್ದಾರೆ.
ಸರಕಾರವು ವೃತ್ತಿ ಆಧಾರಿತವಾಗಿ ಸಮುದಾಯಗಳಲ್ಲಿರುವ ಅನೇಕ ವರ್ಗ/ಪಂಗಡಗಳನ್ನು ಗುರುತಿಸಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಅಭಿವೃದ್ಧಿಯತ್ತ ತರಲು ಮೀಸಲಾತಿ ನೀಡುತ್ತದೆ. ಪ್ರಸ್ತುತ ನಡೆಯುತ್ತಿರುವ ಜಾತಿ ಗಣತಿಯೂ ಇದೇ ಉದ್ದೇಶವನ್ನು ಹೊಂದಿದೆ. ಆದ್ದರಿಂದ ಜನಗಣತಿಯ ವೇಳೆ ಮುಸ್ಲಿಂ ಸಮಾಜದಲ್ಲಿರುವವರು ತಮ್ಮ ವೃತ್ತಿ ಆಧಾರಿತ ವರ್ಗ/ಪಂಗಡದ ಹೆಸರನ್ನು (ಉದಾ: ಬ್ಯಾರಿ, ಕೊಡವ, ಕಸಬ್, ಕಸಾಯಿ) ಉಪಜಾತಿ ಕಾಲಮ್ನಲ್ಲಿ ನಮೂದಿಸಬಹುದು. ಇದರಿಂದ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆಯಲು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.
ಇಂತಹ ಯಾವುದೇ ವರ್ಗ/ಪಂಗಡಗಳಿಗೆ ಸೇರದವರು ಆ ಕಾಲಮ್ ಅನ್ನು ಖಾಲಿ ಬಿಡಬಹುದಾಗಿದೆ. ಈ ಕುರಿತು ಸಮಗ್ರ ಮಾಹಿತಿಯನ್ನು ಪಡೆಯಲಾಗಿದ್ದು ಯಾವುದೇ ಗೊಂದಲಗಳ ಅಗತ್ಯವಿರುವುದಿಲ್ಲ ಎಂದು ಖಾಝಿ ಎಂ.ಅಬ್ದುಲ್ ಹಮೀದ್ ಹೇಳಿದ್ದಾರೆ.





