ಆ.15ಕ್ಕೆ ನಡೂರು ಶಿವರಾಮ ಶೆಟ್ಟಿ ಜನ್ಮಶತಾಬ್ದಿ ಉದ್ಘಾಟನೆ

ನಡೂರು ಶಿವರಾಮ ಶೆಟ್ಟಿ
ಉಡುಪಿ, ಆ.12: ಬ್ರಹ್ಮಾವರ ಪರಿಸರದಲ್ಲಿ ತೀರಾ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಪರಿಶ್ರಮದಿಂದ ಒಟ್ಟು ಏಳು ವಿದ್ಯಾಸಂಸ್ಥೆ ಗಳನ್ನು ಕಟ್ಟಿ ಬೆಳೆಸಿದ ಬ್ರಹ್ಮಾವರ ಗಾಳಿಮನೆ ನಡೂರು ದಿ.ಶಿವರಾಮ ಶೆಟ್ಟಿ ಅವರ ಜನ್ಮಶತಾಬ್ದಿಯ ಉದ್ಘಾಟನೆ ಆ.15ರಂದು ನಡೂರು ಶ್ರೀವಾಣಿ ಪ್ರೌಢ ಶಾಲೆಯ ಶಿವಶಂಕರ ಸಭಾಭವನ ದಲ್ಲಿ ನಡೆಯಲಿದೆ ಎಂದು ನಡೂರು ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಭೋಜ ಹೆಗ್ಡೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೂರದರ್ಶಿತ್ವದ ಗ್ರಾಮೀಣ ವಿದ್ಯಾಸಾಧಕರಾದ ಶಿವರಾಮ ಶೆಟ್ಟಿ ಅವರು 1924ರ ಆ.15ರಂದು ಜನಿಸಿದ ಶಿವರಾಮ ಶೆಟ್ಟಿ ಅವರ ಜನ್ಮಶತಾಬ್ದಿ ಆ.15ರಿಂದ ಪ್ರಾರಂಭ ಗೊಂಡು ಮುಂದಿನ ಒಂದು ವರ್ಷಗಳ ಕಾಲ ನಡೆಯ ಲಿದ್ದು, ಶಿಕ್ಷಣ, ಆರೋಗ್ಯ, ಕಲೆ, ಯಕ್ಷಗಾನ ಹೀಗೆ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಅವರು ಕಟ್ಟಿ ಬೆಳೆಸಿದ ವಿದ್ಯಾಸಂಸ್ಥೆ ಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಕೂರಾಡಿ ಶಾಂತಿನಿಕೇತನದಲ್ಲಿ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ಕಾರಣಾಂತರದಿಂದ ಅರ್ಧಕ್ಕೆ ನಿಲ್ಲಿಸಿ ಮುಂಬಯಿಗೆ ತೆರಳಿ ಅಲ್ಲಿ ಹೊಟೇಲ್ಗಳಲ್ಲಿ ದುಡಿದು ಊರಿಗೆ ಮರಳಿಬಂದು ಬನ್ನಾಡಿಯ ಪರಮಹಂಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಉಡುಪಿಯಲ್ಲಿ ಶಿಕ್ಷಕ ತರಬೇತಿ ಪಡೆದರು. ಬಳಿಕ ಅಣ್ಣನ ಸಹಕಾರದಿಂದ ತೀರಾ ಹಿಂದುಳಿದ ಕಾಡೂರು ಎಂಬ ಗ್ರಾಮೀಣ ಪ್ರದೇಶದಲ್ಲಿ 1950ರಲ್ಲಿ ಶ್ರೀವಾಣಿ ಪ್ರಾಥಮಿಕ ಶಾಲೆ ತೆರೆದು ಅಲ್ಲೇ ಅಧ್ಯಾಪಕರಾಗಿ ದುಡಿದು 1979ರಲ್ಲಿ ನಿವೃತ್ತರಾದರು.
ನಿವೃತ್ತಿಯ ಬಳಿಕ 1980ರಲ್ಲಿ ಬ್ರಹ್ಮಾವರ ಸಮೀಪ ಮಟಪಾಡಿಯಲ್ಲಿ ಶ್ರೀನಿಕೇತನ ಪ್ರಾಥಮಿಕ ಶಾಲೆ, 1981ರಲ್ಲಿ ಕಾಡೂರು ಸಮೀಪದ ಮುಂಡಾಡಿಯಲ್ಲಿ ವಿಶ್ವಜ್ಞಾನ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು. 1984ರಲ್ಲಿ ಅವರು ನಡೂರು ಮತ್ತು ಮಟಪಾಡಿಗಳಲ್ಲಿ ಎರಡು ಪ್ರೌಢ ಶಾಲೆಗಳನ್ನು ಪ್ರಾರಂಭಿಸಿದರು. 1985ರಲ್ಲಿ ಹಳ್ನಾಡಿನಲ್ಲಿ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯನ್ನು ಅವರು ಪ್ರಾರಂಭಿಸಿದರು. ಇದರೊಂದಿಗೆ ನಡೂರು ಮತ್ತು ಮಟಪಾಡಿಗಳಲ್ಲಿ ವಸತಿ ನಿಲಯನ್ನೂ ಅವರು ಕಟ್ಟಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾದರು ಎಂದು ನಿವೃತ್ತ ಶಿಕ್ಷಕರಾದ ಭೋಜ ಹೆಗ್ಡೆ ವಿವರಿಸಿದರು.
2011ರಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ನಡೂರು ಶಿವರಾಮ ಶೆಟ್ಟಿ ಅವರು ಜನಿಸಿ ಆ.15ಕ್ಕೆ 99 ವರ್ಷ ಪೂರ್ಣಗೊಂಡು 100ನೇ ವರ್ಷ ಪ್ರಾರಂಭಗೊಳ್ಳಲಿದೆ. ಇದಕ್ಕಾಗಿ ದಿ.ಶಿವರಾಮ ಶೆಟ್ಟಿ ಜನ್ಮ ಶತಮಾನೋತ್ಸವ ಸಮಿತಿಯನ್ನು ರಚಿಸಿ ಎಲ್ಲಾ ಕಾರ್ಯಕ್ರಮಗಲನ್ನು ಆಯೋಜಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಏಳು ವಿದ್ಯಾಸಂಸ್ಥೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸುಮಾರು 5ಕೋಟಿ ರೂ. ನಿಧಿ ಸಂಗ್ರಹಕ್ಕೆ ಮುಂದಾಗಿದ್ದೇವೆ. ಶಿವರಾಮ ಶೆಟ್ಟಿ ಅವರು ಕಟ್ಟಿ ಬೆಳೆಸಿದ ಕನ್ನಡ ಮಾಧ್ಯಮದ ಸಂಸ್ಥೆಗಳಲ್ಲಿ ದುಡಿಯುತಿದ್ದ ಹೆಚ್ಚಿನ ಶಿಕ್ಷಕರು ನಿವೃತ್ತಿಯಾಗಿದ್ದು, ಇಲ್ಲಿ ಶಿಕ್ಷಣದ ಗುಣಮಟ್ಟ ಉಳಿಸಿಕೊಂಡು ಹೋಗಲು ಅನುದಾನ ರಹಿತ ಸುಮಾರು 28 ಗೌರವ ಶಿಕ್ಷಕರಿಗೆ ಯೋಗ್ಯ ಸಂಭಾವನೆ ನೀಡುವ ಜವಾಬ್ದಾರಿಯೂ ಸಂಘದ ಮೇಲಿದೆ ಎಂದರು.
ನಡೂರಿನಲ್ಲಿ ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ನೂತನ ಆಡಳಿತ ಭವನ ಹಾಗೂ ಶಾಲಾ ಕಟ್ಟಡ ನಿರ್ಮಾಣ ಗೊಳ್ಳುತಿದ್ದು, ಇದರ ಉದ್ಘಾಟನೆ ಸೆ.25ಕ್ಕೆ ನಡೆಯಲಿದೆ. ಆ.15ರಂದು ಅಪರಾಹ್ನ 2:00ಕ್ಕೆ ಶಿವರಾಮ ಶೆಟ್ಟಿ ಜನ್ಮ ಶತಾಬ್ದಿಯನ್ನು ಬ್ರಹ್ಮಾವರ ಲಿಟ್ಲ್ರಾಕ್ ಸ್ಕೂಲ್ನ ನಿರ್ದೇಶಕ ಪ್ರೊ.ಮ್ಯಾಥ್ಯೂ ಸಿ.ನೈನಾನ್ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಕುಂದಾಪುರ ಶಾಸಕ ಕಿರಣ್ಕುಮಾರ್ ಕೊಡ್ಗಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ್ ಶೆಟ್ಟಿ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಶೇಡಿಕೊಡ್ಲು ವಿಠಲ ಶೆಟ್ಟಿ, ಎನ್.ಹರೀಂದ್ರನಾಥ ಶೆಟ್ಟಿ, ಅಶೋಕ್ಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ದಿನಕರ ಶೆಟ್ಟಿ ಬೈಕಾಡಿ, ರಾಜಾರಾಮ ಶೆಟ್ಟಿ ಹಾಗೂ ಗೌರವ ಮಾರ್ಗದರ್ಶಕ ರಾದ ಸಖಾರಾಮ ಸೋಮಯಾಜಿ ಉಪಸ್ಥಿತರಿದ್ದರು.







