ನಾಗರಮಠ: ಮರಳುಗಾರಿಕೆ ವಿರುದ್ಧ ಪ್ರತಿಭಟನೆಗೆ ಅನುಮತಿ ನಿರಾಕರಣೆ; ಏಳನೇ ದಿನ ನಡೆಯದ ಧರಣಿ

(ಆರನೇ ದಿನದ ಧರಣಿಯ ಚಿತ್ರ)
ಉಡುಪಿ, ಎ.22: ನಾಗರಮಠದಲ್ಲಿ ಅವೈಜ್ಞಾನಿಕ ಹಾಗೂ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ಧ ಅಲ್ಲಿನ ಕೃಷಿಕರು ಹಾಗೂ ಸಂತ್ರಸ್ಥರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಧರಣಿಗೆ ಅನುಮತಿ ನಿರಾಕರಿಸಿದ್ದರಿಂದ ಏಳನೇ ದಿನವಾದ ಬುಧವಾರ ನಡೆಯಲಿಲ್ಲ.
ಎ.16ರಿಂದ ಪ್ರಾರಂಭಗೊಂಡ ಅನಿರ್ಧಿಷ್ಟಾವಧಿ ಧರಣಿ ಪ್ರತಿಭಟನೆ ಅಡೆತಡೆಗಳ ಹೊರತಾಗಿಯೂ 21ರವರೆಗೆ ಸತತ ಆರು ದಿನಗಳ ಕಾಲ ನಡೆದಿತ್ತು. ಆದರೆ ನಿನ್ನೆ ಸಂಜೆ ದೂರವಾಣಿ ಮೂಲಕ ಬಂದ ಮಾಹಿತಿಯಂತೆ ಇಂದು ಧರಣಿ ನಡೆಸುವ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಹಾಗೂ ಜಿಲ್ಲಾಧಿಕಾರಿಗಳಿಗೆ ಹೊಸದಾಗಿ ಅರ್ಜಿ ಕೊಟ್ಟು ಅನುಮತಿ ಪಡೆಯುವಂತೆ ತಿಳಿಸಲಾಗಿತ್ತು ಎಂದು ಧರಣಿಯ ನೇತೃತ್ವ ವಹಿಸಿದ್ದ ಗ್ರಾಮಸ್ಥರಾದ ಚಂದ್ರ ಕಾಂಚನ್ ತಿಳಿಸಿದರು.
ಧರಣಿ ಪ್ರಾರಂಭಕ್ಕೆ ಮುನ್ನ ಜಿಲ್ಲಾಧಿಕಾರಿಗಳಿಗೆ ನೀಡಿದ ಅರ್ಜಿಯಲ್ಲಿ 16ರಿಂದ 23ರವರೆಗೆ ಧರಣಿ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ ಎರಡನೇ ದಿನದಿಂದಲೂ ನಮಗೆ ಪ್ರತಿದಿನ ಹೊಸದಾಗಿ ಅನುಮತಿ ಪಡೆಯುವಂತೆ ಮಣಿಪಾಲ ಪೊಲೀಸರು ಒತ್ತಾಯಿಸುತಿದ್ದರು. ಆದರೆ ನಾವು ನಿನ್ನೆಯವರೆಗೆ ನಾವು ನಾಗರಮಠದ ಮರಳು ಗಾರಿಕೆಯ ಸಂತ್ರಸ್ಥರು, ಕೃಷಿಕರು ಅತ್ಯಂತ ಶಾಂತಿಯುತವಾಗಿ ಧರಣಿ ನಡೆಸಿದ್ದವು.
ನಮ್ಮ ಧರಣಿ ಸರಕಾರಿ ಕಚೇರಿ ಅವಧಿಯಲ್ಲಿ ನಡೆಯುತ್ತಿದ್ದವು. ನಾವು ಪ್ರತಿದಿನ ದುಡಿದು ತಿನ್ನುವವರು. ಹೆಂಗಸರು, ಮಕ್ಕಳು, ದುಡಿಯುವ ಪುರುಷರ ಪ್ರತಿದಿನ ಬೆಳಗ್ಗೆ ದೂರದ ನಾಗರಮಠದಿಂದ ಬಂದು ಇಲ್ಲಿ ಧರಣಿ ನಡೆಸಿ ಸಂಜೆ ಮನೆಗೆ ಹೋಗುತಿದ್ದೆವು. ಮರಳುಗಾರಿಕೆಯಿಂದ ಆಗುತ್ತಿರುವ ಸಂಕಷ್ಟದ ಜೊತೆಗೆ ಈಗ ಆರ್ಥಿಕ ಬಿಕ್ಕಟ್ಟು ನಮಗೆ ಕಾಡತೊಡಗಿದೆ. ಈ ನಡುವೆ ಜಿಲ್ಲಾಡಳಿತ ನಮ್ಮ ಹೋರಾಟ ನಿಲ್ಲಿಸಲು ವಿವಿಧ ತಂತ್ರಗಳನ್ನು ಮಾಡುತ್ತಿವೆ ಎಂದು ಪ್ರತಿಭಟನಕಾರರು ದೂರಿದರು.
ಇಂದು ರಾತ್ರಿ ನಾಗರಮಠದಲ್ಲಿ ಸಂತ್ರಸ್ಥರು ಹಾಗೂ ಕೃಷಿಕರು ಸಭೆ ನಡೆಸಿ ಮುಂದಿನ ಹೋರಾಟದ ಕುರಿತು ಚರ್ಚಿಸಿ ತೀರ್ಮಾನಿಸಲಿದ್ದೇವೆ. ನಾಳೆ ಹೊಸದಾಗಿ ಅನುಮತಿ ಪಡೆಯಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು ಅಥವಾ ನಾಗರಮಠದಲ್ಲೇ ದೊಡ್ಡ ಮಟ್ಟದ ಉಗ್ರ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸಲಿದ್ದೇವೆ. ನಮಗೆ ನ್ಯಾಯ ಸಿಗುವವರೆಗೆ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಚಂದ್ರ ಕಾಂಚನ್ ತಿಳಿಸಿದರು.
ಬ್ರಹ್ಮಾವರ ತಾಲೂಕು ಹೊಸಾಳ ಗ್ರಾಮದ ನಾಗರಮಠದ ಸೀತಾನದಿಯ ದಂಡೆಯಲ್ಲಿ ಕಳೆದ 15ದಿನಗಳಿಂದ ನಡೆಯುತ್ತಿರುವ ಮರಳುಗಾರಿಕೆಯಿಂದ ಪರಿಸರದ 100ಕ್ಕೂ ಅಧಿಕ ಕುಟುಂಬಗಳು, ಕೃಷಿಭೂಮಿ ಸಮಸ್ಯೆಯನ್ನು ಎದುರಿಸುತ್ತಿವೆ. ನಾಗರಮಠದಲ್ಲಿ ಮೂರು ದಿನಗಳ ಕಾಲ ಮರಳುಗಾರಿಕೆ ಪ್ರದೇಶದಲ್ಲಿ ಧರಣಿ ನಡೆಸಿದ ಸಂತ್ರಸ್ಥರು ಗುರುವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಲು ಪ್ರಾರಂಭಿಸಿದ್ದರು.
ನೂರಾರು ಮಂದಿ ಪೊಲೀಸರ ಉಪಸ್ಥಿತಿಯಲ್ಲಿ ನಡೆಯುತ್ತಿರುವ ಮರಳುಗಾರಿಕೆಯ ವೇಳೆ ಗುತ್ತಿಗೆದಾರರಿಗೆ ಸಂಪೂರ್ಣ ಭದ್ರತೆ ಒದಗಿಸಿರುವ ಜಿಲ್ಲಾಧಿಕಾರಿಗಳು, ಇದರಿಂದ ಸಂಕಷ್ಟಕ್ಕೊಳಗಾಗಿರುವ, ಕೃಷಿಭೂಮಿ ಕಳೆದು ಕೊಳ್ಳುವ ಭೀತಿಯಲ್ಲಿರುವ ಕೃಷಿಕರು ಹಾಗೂ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಲು ನಿರಾಕರಿಸುತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ನಿರ್ಲಕ್ಷಿಸಿ ಮುಂದೆ ಸಾಗಿದ ಸಂಸದ ಕೋಟ
ಗ್ರಾಮಕ್ಕಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಊರಿನ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಕಳೆದ ಆರು ದಿನಗಳಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತಿದ್ದರೂ ಜಿಲ್ಲಾಧಿಕಾರಿ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ನಮ್ಮ ಬಳಿ ಬಂದು ಯಾಕೆ ಧರಣಿ ಕುಳಿತಿದ್ದೀರಿ ಎಂದು ಕೇಳಿಲ್ಲ ಎಂದು ಚಂದ್ರ ಕಾಂಚನ್ ಬೇಸರದಿಂದ ನುಡಿದರು.
ಊರಿಗಾಗುತ್ತಿರುವ ಅನ್ಯಾಯದ ವಿರುದ್ಧ ಧನಿ ಎತ್ತಬೇಕಿದ್ದ ಉಡುಪಿ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಧರಣಿ ನಿರತರನ್ನು ಕಂಡೂ ಕಾಣದಂತೆ ಕಾರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯತ್ತ ರೊಯ್ಯನೆ ಸಾಗಿದ್ದು ಪ್ರತಿಭಟನಕಾರರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ಬಳಿ ಬಂದು ಒಂದೆರಡು ಮಾತನಾಡುವ, ಧೈರ್ಯ ತುಂಬುವ ಸೌಜನ್ಯವನ್ನು ಕೋಟ ತೋರಲಿಲ್ಲ ಎಂದು ಪ್ರತಿಭಟನಕಾರರು ಬೇಸರ ವ್ಯಕ್ತಪಡಿಸಿದರು.
ಇದು ಜನಪ್ರತಿನಿಧಿಗಳು ಸೇರಿದಂತೆ ಇಡೀ ವ್ಯವಸ್ಥೆ ದುಡ್ಡಿದ್ದವರ ಪರವಾಗಿ ನಿಂತಿರುವುದನ್ನು ತೋರಿಸುತ್ತದೆ ಎಂದ ಅವರು, ಜಿಲ್ಲಾಡಳಿತ ಮರಳುಗಾರಿಕೆ ವಿರೋಧಿಸುತ್ತಿರುವ ಬಡಜನರ, ಕೃಷಿಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಸತಾಯಿಸುತ್ತಿದೆ ಎಂದರು.






