ನಲ್ಲೂರು ಕಸಾಯಿಖಾನೆ ಪ್ರಕರಣ: ದನ -ಕರು ಮಾರಾಟ ಮಾಡಿದ್ದ ಸಂಘ ಪರಿವಾರದ ಕಾರ್ಯಕರ್ತನ ಬಂಧನ

ಶಿವಪ್ರಸಾದ್
ಕಾರ್ಕಳ, ಡಿ.10: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರಿನಲ್ಲಿರುವ ಕಸಾಯಿಖಾನೆಗೆ ದನ ಮತ್ತು ಕರುವನ್ನು ಮಾರಾಟ ಮಾಡಿದ ಆರೋಪದಲ್ಲಿ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ನಲ್ಲೂರಿನ ಶಿವಪ್ರಸಾದ್ ಯಾನೆ ಅಣ್ಣು ಮಡಿವಾಳ(28) ಬಂಧಿತ ಆರೋಪಿ. ನ.12ರಂದು ನಲ್ಲೂರಿನ ಮನೆಯೊಂದಕ್ಕೆ ದಾಳಿ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಆರೋಪದಲ್ಲಿ ಅಶ್ರಫ್ ಅಲಿ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದರು. ಈ ಬಗ್ಗೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ದನಕರುವನ್ನು ಕಳವು ಮಾಡಿ ತಂದು ಕಡಿದು ಮಾಂಸ ಮಾಡಲಾಗಿದೆ. ಈ ಅಕ್ರಮ ಕಸಾಯಿಖಾನೆಯ ಮನೆಯನ್ನು ಸರಕಾರ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದ್ದರು.
ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಅವರು ಈ ದನ ಮತ್ತು ಕರುವನ್ನು ಸಂಘ ಪರಿವಾರದ ಕಾರ್ಯಕರ್ತ ಶಿವಪ್ರಸಾದ್ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಶಿವಪ್ರಸಾದ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತ ಈ ದನಕರುವನ್ನು ಬೇರೆಯವರಿಂದ ಖರೀದಿಸಿ ತಂದು ಅಶ್ರಫ್ ಅಲಿಗೆ ಮಾರಾಟ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.





