ಗ್ಯಾರಂಟಿಯ ಸಮರ್ಪಕ ಅನುಷ್ಟಾನಕ್ಕೆ ‘ನಮ್ಮ ನಡಿಗೆ ವಾರ್ಡ್ ಕಡೆಗೆ’: ರಮೇಶ್ ಕಾಂಚನ್

ಉಡುಪಿ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ‘ನಮ್ಮ ನಡಿಗೆ ವಾರ್ಡ್ ಕಡೆಗೆ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.
ಇಂದು ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ 35 ವಾರ್ಡ್‌ಗಳಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸದಸ್ಯರು ಮತ್ತು ಅಧಿಕಾರಿಗಳು ಮುಂದಾಗಬೇಕು ಎಂದವರು ಹೇಳಿದರು.
ಉಡುಪಿ ತಾಲೂಕಿನ 16 ಗ್ರಾಮ ಪಂಚಾಯತ್‌ಗಳಲ್ಲಿ ನಮ್ಮ ನಡಿಗೆ ಪಂಚಾಯತ್ ಕಡೆಗೆ ಕಾರ್ಯಕ್ರಮ ಪೂರ್ಣಗೊಂಡಿದ್ದು, ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ನಡೆದಿರುವ ಬಗ್ಗೆ ಪರಿಶೀಲಿಸಲಾಗಿದೆ. ಮುಂದಿನ ದಿನಗಳಲ್ಲಿ ವಾರ್ಡ್‌ವಾರು ಪರಿಶೀಲನೆ ನಡೆಸಿ ಯೋಜನೆಗಳ ಅನುಷ್ಠಾನದಲ್ಲಿ ಫಲಾನುಭವಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಇದುವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಜುಲೈ ತಿಂಗಳಿನವರೆಗೆ 1,67,57,30,000ರೂ. ನಗದು ಹಣ ಫಲಾನುಭವಿಗಳ ಖಾತೆಗೆ ಜಮೆ ಯಾಗಿದೆ. ಉಳಿದ ಕಂತುಗಳಿಗೆ ಸರಕಾರದಿಂದ ಅನುದಾನ ಬಿಡುಗಡೆ ಗೊಳಿಸಲಾಗಿದ್ದು ಆಗಸ್ಟ್ ತಿಂಗಳಿನಿಂದ ಬಾಕಿ ಇರುವ ಕಂತುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಗ್ಯಾರಂಟಿ ಯೋಜನೆಯ ಅರ್ಹತೆ ಹೊಂದಿದ್ದು, ಹಲವರಿಗೆ ಆದಾಯ ತೆರಿಗೆ ಮತ್ತು ಜಿಎಸ್‌ಟಿ ನೋಂದಣಿ ಕಾರಣಗಳಿಂದ ಯೋಜನೆಯ ನೆರವು ಸಿಗುತ್ತಿಲ್ಲ. ಈ ಬಗ್ಗೆ ಜಿಲ್ಲೆಯಿಂದ ರಾಜ್ಯಕ್ಕೆ ಪ್ರಸ್ತಾವನೆ ಕಳುಹಿಸಿ ಇಂತಹ ಫಲಾನುಭವಿಗಳಿಗೆ ವಿನಾಯತಿ ಪಡೆದು ಕೊಳ್ಳಬೇಕು. ಕುಟುಂಬ ಆ್ಯಪ್‌ನಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆ ಹರಿಸಬೇಕು. ಯೋಜನೆಗೆ ಹೆಚ್ಚಿನ ಪ್ರಚಾರ ನೀಡುವ ನಿಟ್ಟಿನಲ್ಲಿ ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಫಲಕಗಳನ್ನು ಅಳವಡಿಸಬೇಕು ಎಂದರು.
ಗೃಹ ಜ್ಯೋತಿ ಯೋಜನೆಯಡಿ ಪ್ರತಿ ತಿಂಗಳಿಗೆ ಸರಾಸರಿ 59,983 ಫಲಾನುಭಗಳಲ್ಲಿ 36,408 ಮಂದಿಗೆ ಶೂನ್ಯ ಬಿಲ್ ಬರುತ್ತಿದ್ದು 5,48,23,843 ರೂ. ಅನುದಾನದ ಲಾಭ ಪಡೆಯಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಹಕರಿಗೆ 5-6 ತಿಂಗಳಿಗೊಮ್ಮೆ ವಿದ್ಯುತ್ ಬಿಲ್ ಬರುತ್ತಿದ್ದು ಪ್ರತಿ ತಿಂಗಳ ಬಿಲ್ ಆಯಾ ತಿಂಗಳಿನಲ್ಲಿ ನೀಡಬೇಕು. ಕೆಲವೊಂದು ಕಡೆ ನಿಗದಿತ ಯುನಿಟ್‌ಗಿಂತಲು ಕಡಿಮೆ ದ್ಯುತ್ ಬಳಕೆಯಾಗಿದ್ದರೂ ಬಿಲ್ ಬರುವ ಬಗ್ಗೆ ಸದಸ್ಯರು ಸಭೆಗೆ ತಿಳಿಸಿದಾಗ ಈ ರೀತಿ ಸಮಸ್ಯೆಗಳಾದಾಗ ಅಧಿಕಾರಿಗಳು ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.
ಯುವನಿಧಿ ಯೋಜನೆಯಡಿ 778 ಯುವಕರು ನೋಂದಣಿಯಾಗಿದ್ದು 622 ಫಲಾನುಭವಿಗಳಿಗೆ 1,53,37,500 ರೂ. ಅಂದಾಜು ಮೊತ್ತ ಪಾವತಿಸಲಾಗಿದೆ. ಉದ್ಯೋಗ ಅರಸುವ ಯುವಕರು ಮತ್ತು ಅವರ ಕುಟುಂಬಗಳಿಗೆ ಆರ್ಥಿಕ ಸಹಾಯ ಒದಗಿಸಲು ಯೋಜನೆ ತರಲಾಗಿದೆ. ಇದಕ್ಕೆ ಹೆಚ್ಚಿನ ಪ್ರಚಾರ ನೀಡಬೇಕು. ಮುಂದಿನ ದಿನಗಳಲ್ಲಿ ನರ್ಸಿಂಗ್ ಕಾಲೇಜುಗಳಲ್ಲಿ ಸಮಾವೇಶ ನಡೆಸಿಯೋಜನೆ ಬಗ್ಗೆ ಮಾಹಿತಿ ನೀಡಿ ಎಂದರು.
ಶಕ್ತಿ ಯೋಜನೆಯಡಿ ಅಕ್ಟೋಬರ್ ತಿಂಗಳವರೆಗೆ 31756767 ವಯಸ್ಕ, 560631 ಮಕ್ಕಳು ಪ್ರಯಾಣಿಸಿದ್ದು 125,71,28,685 ರೂ. ಲಾಭ ಪಡೆದುಕೊಂಡಿದ್ದಾರೆ. ಕೊರೊನಾ ಕಾಲದಲ್ಲಿ ಸ್ಥಗಿತವಾಗಿರುವ ಮಾರ್ಗಗಳಲ್ಲಿ ಬಸ್‌ಗಳ ಪುನರಾರಂಭಕ್ಕೆ ಜನರಿಂದ ಬೇಡಿಕೆ ಇದೆ. ಈಗಾಗಲೇ 12 ಬಸ್‌ಗಳ ಪರ್ಮಿಟ್‌ಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರಕಾರದಿಂದ ಅನುಮತಿ ಬಂದ ಕೂಡಲೇ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗುವುದು ಎಂದರು.
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ತರಿಸಲಾಗುತ್ತಿದ್ದು ಶೇ.94.02ರಷ್ಟು ವಿತರಣೆ ಪ್ರಗತಿಯಲ್ಲಿದೆ. ಪಡಿತರ ಚೀಟಿಯಲ್ಲಿ ತಿದ್ದುಪಡಿ ಗಳಿದ್ದರೆ ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಬೇಕು. ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಸಮಸ್ಯೆ ಗಳಿದ್ದರೆ ಅಧ್ಯಕ್ಷರ ಗಮನಕ್ಕೆ ತಂದಲ್ಲಿ ಪರಿಹರಿಸಲಾಗುವುದು ಎಂದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಯಾ, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರಾದ ಪ್ರೇಮಲತಾ ಸೋನ್ಸ್, ಅರ್ಚನಾ ದೇವಾಡಿಗ, ಮಾಲತಿ ಬಿ ಆಚಾರ್ಯ, ವೆಂಕಟೇಶ್ ಸುವರ್ಣ, ಉಸ್ತಾದ್ ಸಾದಿಕ್ ತೋನ್ಸೆ, ಸುಧಾಕರ್ ಪೂಜಾರಿ, ಗಣೇಶ್, ಶಬರೀಶ್ ಸುವರ್ಣ, ಸಂತೋಷ್ ಶೆಟ್ಟಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







