ರಾಷ್ಟ್ರ ಮಟ್ಟದ ದೀನ್‌ದಯಾಳ್ ಉಪಾಧ್ಯಾಯ ಪಂಚಾಯತ್ ಸತತ ಅಭಿವೃದ್ಧಿ ಪುರಸ್ಕಾರ: ಉಡುಪಿಯ 5 ಗ್ರಾಮ ಪಂಚಾಯತ್ ಆಯ್ಕೆ

ಉಡುಪಿ, ಮಾ.31: ಕೇಂದ್ರ ಸರಕಾರದ ಪಂಚಾಯತ್‌ರಾಜ್ ಸಚಿವಾಲಯ ಪ್ರಕಟಿಸಿದ 2025ನೇ ಸಾಲಿನ ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸತತ ಅಭಿವೃದ್ಧಿ ಪುರಸ್ಕಾರಕ್ಕೆ (ಡಿಡಿಯುಪಿಎಸ್‌ವಿಪಿ) ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಆರು ಗ್ರಾಮ ಪಂಚಾಯತ್‌ಗಳಲ್ಲಿ ಐದು ಪಂಚಾಯತ್‌ಗಳು ಉಡುಪಿ ಜಿಲ್ಲೆಗೆ ಸೇರಿವೆ.
ಈ ಪುರಸ್ಕಾರಕ್ಕೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಮತ್ತು ಮಡಾಮಕ್ಕಿ, ಕುಂದಾಪುರ ತಾಲೂಕಿನ ವಂಡ್ಸೆ ಮತ್ತು ಹಕ್ಲಾಡಿ ಹಾಗೂ ಕಾರ್ಕಳ ತಾಲೂಕಿನ ಸಾಣೂರು ಆಯ್ಕೆಯಾಗಿರುವ ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳಾಗಿವೆ. ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವದ ಹಾಲನಾಯಕನಹಳ್ಳಿ ರಾಷ್ಟ್ರೀಯ ಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾ ಗಿರುವ ಮತ್ತೊಂದು ಗ್ರಾಮ ಪಂಚಾಯತ್ ಆಗಿದೆ.
ಇವುಗಳಲ್ಲಿ ಮುದ್ರಾಡಿ ಗ್ರಾಮ ಪಂಚಾಯತ್ ಬಡತನ ಮುಕ್ತ ಹಾಗೂ ಜೀವನೋಪಾಯ ಸಂವರ್ಧನ ವಿಭಾಗದಲ್ಲಿ ಪ್ರಶಸ್ತಿ ಪಡೆದರೆ, ವಂಡ್ಸೆ ಗ್ರಾಮ ಪಂಚಾಯತ್ ಆರೋಗ್ಯಪೂರ್ಣ ಪಂಚಾಯತ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದು ಕೊಂಡಿದೆ. ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಪಂ, ಜಲಸಮೃದ್ಧ ಮೂಲಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.
ಕಾರ್ಕಳ ತಾಲೂಕಿನ ಸಾಣೂರು ಗ್ರಾಪಂ, ಸ್ವಯಂಸಮೃದ್ಧ ಮೂಲ ಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ಹಾಗೂ ಹಕ್ಲಾಡಿ ಗ್ರಾಪಂ ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಸುರಕ್ಷತಾ ಪಂಚಾಯತ್ ವಿಭಾಗದಲ್ಲಿ ರಾಜ್ಯದ ಅತ್ಯುತ್ತಮ ಪಂಚಾಯತ್ ಆಗಿ ಮಾನ್ಯತೆ ಪಡೆದಿದೆ. ಬೆಂಗಳೂರಿನ ಹಾಲನಾಯಕನಹಳ್ಳಿ ಪಂಚಾಯತ್ ಮಕ್ಕಳ ಸ್ನೇಹಿ ಪಂಚಾಯತ್ ಆಗಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂದು ಕೇಂದ್ರ ಪಂಚಾಯತ್‌ರಾಜ್ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ರಾಜ್ಯಗಳಿಗೆ ಕೊಡುವ ಒಟ್ಟು 6ರಲ್ಲಿ 5 ವಿಭಾಗಗಳಲ್ಲಿ ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳು ಆಯ್ಕೆಯಾಗಿರು ವುದಕ್ಕೆ ಅತ್ಯಂತ ಹರ್ಷವನ್ನು ವ್ಯಕ್ತಪಡಿಸಿರುವ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಐದು ಗ್ರಾಪಂಗಳು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಅಪೂರ್ವ ಸಾಧನೆಗೆ ಸಂಬಂಧಿಸಿದಂತೆ ಪಂಚಾಯತಿಗಳ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಗ್ರಾಮಸ್ಥರನ್ನು ಅಭಿನಂದಿಸಿರುವ ಕೋಟ, ಇಂತಹ ಸಾಧನೆಗಳು ಇತರ ಪಂಚಾಯತಿಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದ್ದಾರೆ.






