ನೇಜಾರು ತಾಯಿ-ಮಕ್ಕಳ ಹತ್ಯೆ ಪ್ರಕರಣ: ಕುಟುಂಬದ ಯಜಮಾನ, ಮಗನಿಂದ ಕೋರ್ಟ್ನಲ್ಲಿ ಸಾಕ್ಷ್ಯ

ಆರೋಪಿ ಪ್ರವೀಣ್ ಪ್ರದೀಪ್ ಚೌಗುಲೆ
ಉಡುಪಿ: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕುಟುಂಬದ ಯಜನಮಾನ ಮತ್ತು ಅವರ ಮಗ ಸೇರಿದಂತೆ ಒಟ್ಟು ಮೂವರು ಸಾಕ್ಷಿಗಳ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲು ಶನಿವಾರ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಯಿತು.
ಮೃತ ಹಸಿನಾರ ಪತಿ ನೂರ್ ಮುಹಮ್ಮದ್, ಅವರ ಮಗ ಅಸದ್ ಮತ್ತು ನೆರೆಮನೆಯ ಫರಾನ ನ್ಯಾಯಾಧೀಶ ಸಮಿವುಲ್ಲಾ ಅವರ ಮುಂದೆ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯಗಳನ್ನು ನುಡಿದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ಸಾಕ್ಷಿಗಳ ಮುಖ್ಯ ವಿಚಾರಣೆ ನಡೆಸಿದರೆ, ಆರೋಪಿ ಪ್ರವೀಣ್ ಪ್ರದೀಪ್ ಚೌಗುಲೆ ಪರ ವಕೀಲ ರಾಜು ಪೂಜಾರಿ ಸಾಕ್ಷಿಗಳನ್ನು ಪಾಟಿಸವಾಲಿಗೆ ಒಳಪಡಿಸಿದರು. ಈ ಸಂದರ್ಭದಲ್ಲಿ ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.
ಹೀಗೆ ಈವರೆಗೆ ಒಟ್ಟು 10 ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿದೆ. ಡಿ.17 ಮತ್ತು 18ರಂದು ಒಟ್ಟು 10-12ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ನ್ಯಾಯಾಧೀಶರು ಆದೇಶ ನೀಡಿದರು.





