ನವ ಭಾರತ ಯಾರಿಗೂ ತಲೆ ಬಾಗದು; ಶಾಂತಿ ವಿಷಯದಲ್ಲಿ ರಾಜಿ ಇಲ್ಲ : ಪ್ರಧಾನಿ ಮೋದಿ

ಉಡುಪಿ, ನ.28: ಇದು ನವ ಭಾರತ. ನಾವು ಯಾರ ಮುಂದೂ ತಲೆ ಬಾಗಿಸುವುದಿಲ್ಲ ಹಾಗೂ ದೇಶದ ಶಾಂತಿ ಮತ್ತು ಸ್ಥಿರತೆಯ ವಿಷಯದಲ್ಲಿ ಯಾರೊಂದಿಗೂ ರಾಜಿಯೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಘೋಷಿಸಿದ್ದಾರೆ.
ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆದಿರುವ ಬೃಹತ್ ಗೀತೋತ್ಸವದ ಅಂಗವಾಗಿ ಇಂದು ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಶ್ರೀಕೃಷ್ಣ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಭಗವದ್ಗೀತೆಯ ಧರ್ಮೋಪದೇಶ ನೀಡಿದ್ದಾನೆ. ಸತ್ಯ ಹಾಗೂ ಶಾಂತಿಯ ಪುನರ್ ಸ್ಥಾಪನೆಗೆ ಅತ್ಯಾಚಾರಿಗಳನ್ನು ಶಿಕ್ಷಿಸುವುದು ಮುಖ್ಯ ಎಂಬುದನ್ನು ಗೀತೆ ನಮಗೆ ಬೋಧಿಸುತ್ತದೆ. ಇದು ನಮ್ಮ ಇಂದಿನ ರಾಷ್ಟ್ರೀಯ ಭದ್ರತಾ ನೀತಿಯೂ ಹೌದು ಎಂದವರು ಹೇಳಿದರು.
ಕೆಂಪು ಕೋಟೆಯಿಂದ ತಾನು ಘೋಷಿಸಿದ ಮಿಷನ್ ಸುದರ್ಶನ್ ಚಕ್ರದ ಕುರಿತು ವಿವರಿಸಿದ ಪ್ರಧಾನಿ, ಇದನ್ನು ಸಹ ಕೃಷ್ಣನ ಗೀತೆಯ ಸಂದೇಶದಂತೆ ರೂಪಿಸಲಾಗಿದೆ. ದೇಶದ ಪ್ರಮುಖ ತಾಣಗಳು, ಕೈಗಾರಿಕೆಗಳು ಹಾಗೂ ಇತರ ಸಾರ್ವಜನಿಕ ಕ್ಷೇತ್ರಗಳ ಸುತ್ತಲೂ ಬಲವಾದ ಭದ್ರತಾ ಕೋಟೆಯನ್ನು ನಿರ್ಮಿಸಿ ಯಾವುದೇ ಶತ್ರು ಇದರತ್ತ ಬೊಟ್ಟು ತೋರಿಸಿದರೆ ಭಾರತದ ಸುದರ್ಶನ ಚಕ್ರ ಅದನ್ನು ಸರ್ವನಾಶ ಮಾಡುತ್ತದೆ ಎಂದರು.
ಇದಕ್ಕಾಗಿ ನರೇಂದ್ರ ಮೋದಿ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕ್ಷಿಪ್ರಗತಿಯಲ್ಲಿ ಭಾರತ ನೀಡಿದ ಆಪರೇಷನ್ ಸಿಂಧೂರ ಪ್ರತಿದಾಳಿಯ ಉದಾಹರಣೆ ನೀಡಿದರು. ಇದು ದೇಶದ ನವಭಾರತ. ನಾವು ಯಾವುದೇ ಆಕ್ರಮಣವನ್ನು ಸಹಿಸುವುದಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಉತ್ತರವಾಗಿದೆ ಎಂದರು. ಈ ದಾಳಿಯಲ್ಲಿ ಕರ್ನಾಟಕದವರೂ ಬಲಿಯಾಗಿದ್ದಾರೆ ಎಂದರು.
‘ಹಿಂದೆಲ್ಲಾ ಇಂಥ ದಾಳಿಗಳಾದಾಗ ಸರಕಾರ ಸುಮ್ಮನೆ ಕುಳಿತಿರುತ್ತಿತ್ತು. ಆದರೆ ಇದು ನವ ಭಾರತ, ನಾವು ಯಾರಿಗೂ ತಲೆಬಾಗುವುದಿಲ್ಲ. ದೇಶದ ಪ್ರಜೆಗಳ ರಕ್ಷಣೆಯ ಕರ್ತವ್ಯದಿಂದ ಎಂದೂ ವಿಮುಖರಾಗುವುದಿಲ್ಲ. ಭಾರತಕ್ಕೆ ಶಾಂತಿಯನ್ನು ಹೇಗೆ ಸ್ಥಾಪಿಸಬೇಕು ಹಾಗೂ ದೇಶದ ಪ್ರಜೆಗಳನ್ನು ಹೇಗೆ ರಕ್ಷಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ.’ ಎಂದರು.
ನಾವು ವಸುದೈವ ಕುಟುಂಬಕಂನ್ನು ನಂಬುತ್ತೇವೆ. ಇದೇ ವೇಳೆ ಧರ್ಮೋ ರಕ್ಷತಿ ರಕ್ಷಿತ: ಎಂಬುದನ್ನು ಅರಿತಿದ್ದೇವೆ. ನಮ್ಮ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆ ಹಿಂದೆಯೂ ಗೀತೆಯ ಸಂದೇಶವಿದೆ. ಒಂದು ಲಕ್ಷ ಕಂಠಗಳು ಸೇರಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸುವುದು ದಿವ್ಯ ಅನುಭೂತಿಯನ್ನು ನೀಡುತ್ತದೆ. ಇದು ಭಾರತದ ಭವ್ಯ ನಾಗರೀಕತೆಯನ್ನು, ಸಜೀವ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುತ್ತದೆ ಎಂದು ಹೇಳಿದರು.
ನಾನು ಕೇವಲ ಮೂರು ದಿನಗಳ ಹಿಂದೆ ಭೇಟಿ ನೀಡಿದ ಅಯೋಧ್ಯೆಗೂ, ಉಡುಪಿ ನಡುವೆ ಸಂಬಂಧವಿದೆ ಎಂದ ಪ್ರದಾನಿ ಮೋದಿ, ನ.25ರಂದು ರಾಮ ಜನ್ಮಭೂಮಿ ಮಂದಿರದಲ್ಲಿ ತಾನು ಧರ್ಮಧ್ವಜವನ್ನು ಸ್ಥಾಪಿಸಿದ್ದೇನೆ. ಉಡುಪಿಯೂ ಸೇರಿದಂತೆ ದೇಶದ ವಿವಿಧೆಡೆಗಳ ಅಸಂಖ್ಯಾತ ಭಕ್ತರು ಇದಕ್ಕೆ ಸಾಕ್ಷಿಯಾಗಿದ್ದಾರೆ. ರಾಮ ಜನ್ಮಭೂಮಿ ಹೋರಾಟದಲ್ಲಿ ಉಡುಪಿಯ ಅದರಲ್ಲೂ ವಿಶೇಷವಾಗಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರ ಪಾತ್ರವನ್ನು ಸ್ಮರಿಸಿಕೊಂಡರು.
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮ ಮಂದಿರದಲ್ಲಿ ಭವ್ಯ ಧ್ವಾರವೊಂದಕ್ಕೆ ಜಗದ್ಗುರು ಮಧ್ವಾಚಾರ್ಯರ ಹೆಸರಿಡಲಾಗಿದೆ. ಮಧ್ವಾಚಾರ್ಯರ ಉಡುಪಿ ಹಾಗೂ ದೇಶಕ್ಕೆ ‘ಶ್ರೇಷ್ಠ ಹೆಮ್ಮೆ’ಯ ವಿಷಯವಾಗಿದ್ದಾರೆ. ಅವರು ಕರ್ನಾಟಕದ ಆಧ್ಯಾತ್ಮಿಕ ಪರಂಪರೆಗೆ ಪ್ರಮುಖ ಕೊಂಡಿಯಾಗಿದ್ದು, ರಾಮಮಂದಿರದ ಧ್ವಾರಕ್ಕೆ ಅವರ ಹೆಸರನ್ನಿಟ್ಟಿರುವುದು ಅವರಿಗೆ ನೀಡುವ ಗೌರವವಾಗಿದೆ ಎಂದರು.
ದ್ವೈತ ಮತದ ಸಂಸ್ಥಾಪಕರಾದ ಮಧ್ವಾಚಾರ್ಯರು ಕರ್ನಾಟಕದ ಹರಿದಾಸ ಪರಂಪರೆಗೆ ಸ್ಪೂರ್ತಿಯ ಸೆಲೆಯಾಗಿದ್ದರು. ಇವರಿಂದ ಸ್ಪೂರ್ತಿ ಪಡೆದ ಪುರಂದರದಾಸರು ಹಾಗೂ ಕನಕದಾಸರು ಸರಳ ಕನ್ನಡದಲ್ಲಿ ಭಕ್ತಿ ಸಂದೇಶವನ್ನು ಜನತೆಗೆ ತಲುಪಿಸಿದರು. ದಾಸರ ಪದಗಳು ಕರ್ನಾಟಕದ ಪ್ರತಿ ಮನೆ-ಮನಗಳಿಗೂ ತಲುಪಿಸಿದ್ದು, ಈಗಿನ ಯುವ ಮನಸ್ಸುಗಳಲ್ಲಿ ಪ್ರತಿಧ್ವನಿ ಸುತ್ತಿದೆ ಎಂದರು.
ಕನಕದಾಸರು ಕೃಷ್ಣನ ದರ್ಶನ ಮಾಡಿದ ಆ ಸಣ್ಣ ಕಿಂಡಿಯಲ್ಲಿ (ಕನಕನ ಕಿಂಡಿ) ಕೃಷ್ಣನನ್ನು ನೋಡಿದಾಗ ನನಗೆ ಆತನ ಭಕ್ತಿಯ ಆಳ ತಿಳಿಯಿತು ಎಂದು ನರೇಂದ್ರ ಮೋದಿ ಭಾವುಕತೆಯಿಂದ ನುಡಿದರು.
ಕನಕದಾಸರಿಗೆ ಪುಷ್ಪಾರ್ಚನೆ; ಕಿಂಡಿಗೆ ಕನಕ ಕವಚ ಅರ್ಪಣೆ
ರೋಡ್ ಶೋ ಬಳಿಕ ಕೃಷ್ಣ ಮಠಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ರಥಬೀದಿಯಲ್ಲಿ ಕನಕ ಗೋಪುರದ ಎದುರಿಗಿರುವ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಅಲ್ಲೇ ಎದುರಿಗಿರುವ ಕನಕ ಗೋಪುರದ ಕನಕದಾಸರು ಕೃಷ್ಣನ ದರ್ಶನ ಮಾಡಿದ ಕನಕನ ಕಿಂಡಿಗೆ ಹೊದಿಸಿರುವ ಕನಕ ಕವಚವನ್ನು ಉದ್ಘಾಟಿಸಿದರು.
ಬಳಿಕ ಮಠದೊಳಗೆ ತೆರಳಿದ ಮೋದಿ, ಗರ್ಭಗುಡಿಯ ಎದುರಿನ ತೀರ್ಥ ಮಂಟಪಕ್ಕೆ ಹೊದಿಸಿರುವ ಚಿನ್ನದ ಕವಚವನ್ನೂ ಅನಾವರಣಗೊಳಿಸಿದರು. ಬಳಿಕ ಕನಕ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿದರು.
ಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪ್ರಧಾನಮಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ವಿಶೇಷ ಹೆಲಿಕಾಪ್ಟರ್‌ನಲ್ಲಿ ಆದಿಉಡುಪಿ ಹೆಲಿಪ್ಯಾಡ್ ಬಂದ ಪ್ರಧಾನಿ, ರೋಡ್‌ಶೋ ಮೂಲಕ 11:40ರ ಸುಮಾರಿಗೆ ಕೃಷ್ಣ ಮಠಕ್ಕೆ ಆಗಮಿಸಿದರು. ಅಲ್ಲಿ ಸುಮಾರು 40ನಿಮಿಷಗಳ ಕಾಲ ಇದ್ದ ಅವರು 12:20ಕ್ಕೆ ವೇದಿಕೆಯ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದರು.







