ನೂತನ ಶ್ರೀನಂದಿಕೇಶ್ವರ ದೇವಳದ ನೀಲನಕ್ಷೆ ಬಿಡುಗಡೆ
ಕುಂದಾಪುರ, ಅ.24: ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಶ್ರೀನಂದಿಕೇಶ್ವರ ದೇವಳಕ್ಕೆ ನೂತನ ಶಿಲಾಮಯ ದೇವಸ್ಥಾನ ನಿರ್ಮಾಣದ ನೀಲನಕ್ಷೆ ಬಿಡುಗಡೆ ಹಾಗೂ ಚಾಲನೆ ಕಾರ್ಯಾಕ್ರಮ ಮಂಗಳವಾರ ನಡೆಯಿತು.
ಕುಂದಾಪುರದ ಉದ್ಯಮಿ ದತ್ತಾನಂದ ನೀಲನಕ್ಷೆಯನ್ನು ಬಿಡುಗಡೆಗೊಳಿಸಿ, ಶುಭಕೋರಿದರು. ಶ್ರೀಮೈಲಾರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಮೇಶ ಬಿಲ್ಲವ ಶಿಲ್ಪಿಗಳಿಗೆ ಚೆಕ್ ಹಸ್ತಾಂತರಿಸುವ ಮೂಲಕ ಕಾರ್ಯಕ್ಕೆ ಚಾಲನೆ ನೀಡಿದರು.
ಶ್ರೀನಂದಿಕೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಯು. ಮಾತನಾಡಿ, ಕುಂದಾಪುರದ ಪ್ರಾಚೀನ ದೇಗುಲಗಳಲ್ಲಿ ಒಂದಾಗಿದ್ದು, ಸರಿ ಸುಮಾರು 400 ವರ್ಷಗಳ ಇತಿಹಾಸವಿದೆ. ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಇದರ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಅಧ್ಯಕ್ಷತೆಯನ್ನು ಶ್ರೀನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾಗೇಶ್ ವಹಿಸಿದ್ದರು. ಭಟ್ರಹಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸ್ಥಾಪಕಾಧ್ಯಕ್ಷ ರಾಮಕೃಷ್ಣ ಬಿಜೂರು, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ, ಶ್ರೀಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಜಯಾನಂದ ಖಾರ್ವಿ ಮಾತನಾಡಿದರು. ರಾಜೇಶ್ ಕಾವೇರಿ ಕಾರ್ಯಕ್ರಮ ನಿರೂಪಿಸಿದರು.





