ಹೊಸ ವರ್ಷಾಚರಣೆ | ಉಡುಪಿ ಜಿಲ್ಲೆಯಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್

ಉಡುಪಿ : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಒಟ್ಟು 13 ಡಿಎಆರ್ ತುಕಡಿ ಹಾಗೂ 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಹೊಸ ವರ್ಷದ ದಿನದಂದು ಜಿಲ್ಲೆಯಲ್ಲಿ ಇರುವ ಎಲ್ಲಾ ಹೈವೇ ಪಟ್ರೋಲ್ / ಹೊಯ್ಸಳ ವಾಹನಗಳು ಕಡ್ಡಾಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಸ್ತಿನಲ್ಲಿಡಲಾಗಿದೆ ಎಂದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ. 3 ಡ್ರೋನ್ ಕ್ಯಾಮೆರಾ, 10 ಹೆಚ್ಚುವರಿ ಪೆಟ್ರೋಲಿಂಗ್ ವಾಹನಗಳು ಹಾಗೂ 24 ಸಾರ್ವಜನಿಕ ಧ್ವನಿವರ್ಧಕ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ..
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರು, ವೀಲಿಂಗ್ ಮಾಡುವವರು ಹಾಗೂ ಇತರೆ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಡಿ.31ರಂದು ಕರಾವಳಿ ಪ್ರದೇಶದಲ್ಲಿನ ಸಮುದ್ರ/ಬೀಚ್‌ಗಳಲ್ಲಿ ನಡೆಯುವ ಹೊಸ ವರ್ಷದ ಆಚರಣೆಗಳ ಸುರಕ್ಷತಾ ಕ್ರಮಗಳ ಕುರಿತು ಚರ್ಚಿಸಲು CSP ಠಾಣೆಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ವ್ಯಾಪ್ತಿಯ ಠಾಣಾಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
► ಜಿಲ್ಲೆಯಲ್ಲಿ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ ಹೊಸ ವರ್ಷದ ಆಚರಣೆ ನಡೆಯುವ ಎಲ್ಲಾ ಹೋಂ ಸ್ಟೇಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು, ಪಬ್‌ಗಳು / ಬಾರ್‌ಗಳನ್ನು ಪರಿಶೀಲಿಸಿ, ಯಾವುದೇ ಅಕ್ರಮ ಚಟುವಟಿಕೆಗಳು (ರೇವ್ ಪಾರ್ಟಿ, ಡ್ರಗ್ ಪಾರ್ಟಿ) ನಡೆಯದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುವುದು.
►ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಬುಕಿಂಗ್‌ಗಳು, ವೆಬ್ ಪುಟಗಳನ್ನು ಪರಿಶೀಲಿಸಿ ಕಾರ್ಯಕ್ರಮದ ವ್ಯವಸ್ಥೆಗಳ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.
►ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್‌ಗಳಲ್ಲಿ ವಿಶೇಷವಾಗಿ ಸಾಕಷ್ಟು ಸಂಖ್ಯೆಯಲ್ಲಿ ಪುರುಷ ಹಾಗೂ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
►ಉಡುಪಿ ಜಿಲ್ಲಾ “ಅಕ್ಕಪಡೆ” ತಂಡವನ್ನು ನಗರ ವ್ಯಾಪ್ತಿಯೊಳಗೆ ನಿಯೋಜಿಸಲಾಗುವುದು.
►ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ಕುರಿತು ವಿಶೇಷ ಗಮನ ಹರಿಸಿ, ವಿದೇಶಿ ನಾಗರಿಕರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.
► ʼCelebrate Responsiblyʼ (ಜವಾಬ್ದಾರಿಯಿಂದ ಆಚರಿಸಿ) ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಹಾಗೂ ಉತ್ತೇಜನ ನೀಡಲಾಗಿದೆ.
► ದೊಡ್ಡ ಸಾರ್ವಜನಿಕ ಸಮಾವೇಶಗಳ ಮೇಲ್ವಿಚಾರಣೆಗಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸರು ವಿಶೇಷ ಡ್ರೋನ್ ಕ್ಯಾಮೆರಾಗಳನ್ನು ಬಳಸಲಿದ್ದಾರೆ.







