ಹೆರ್ಗದ ಸರಕಾರಿ ವಸತಿ ಸಮುಚ್ಚಯ ಫಲಾನುಭವಿಗಳಿಗೆ ಹಸ್ತಾಂತರಿಸಿ: ನಿವೇಶನ ರಹಿತ ಫಲಾನುಭವಿಗಳಿಂದ ಧರಣಿ, ಮನವಿ ಸಲ್ಲಿಕೆ

ಉಡುಪಿ, ಅ.5: ಮಣಿಪಾಲ ಸಮೀಪದ ಹೆರ್ಗದಲ್ಲಿರುವ ಸರಕಾರಿ ವಸತಿ ಸಮುಚ್ಚಯದ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ, ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಫಲಾನುಭವಿಗಳಿಗೆ ಶೀಘ್ರವೇ ಹಸ್ತಾಂತರಿಸುವಂತೆ ಒತ್ತಾ ಯಿಸಿ ಉಡುಪಿ ನಗರಸಭಾ ವ್ಯಾಪ್ತಿಯ ನಿವೇಶನ ರಹಿತ ಫಲಾನುಭವಿಗಳು ಇಂದು ನಗರಸಭೆಯ ಎದುರು ಧರಣಿ ನಡೆಸಿ ಘೋಷಣೆ ಕೂಗಿದರಲ್ಲದೇ, ತಮ್ಮ ಬೇಡಿಕೆಯನ್ನೊಳಗೊಂಡ ಮನವಿಯನ್ನು ಪೌರಾಯುಕ್ತರಿಗೆ ಸಲ್ಲಿಸಿದರು.
ಸ್ವಂತ ಸೂರಿನ ಕನಸಿನೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ತಾವು ಕೂಡಿಟ್ಟ ಹಣವನ್ನೆಲ್ಲಾ ಸುರಿದು ಮನೆಯನ್ನು ಕಾದಿರಿಸಿದ 240 ಕುಟುಂಬಗಳು ಈಗ ಸಂಕಷ್ಟದ ಸರಮಾಲೆಯನ್ನೇ ಎದುರಿಸುತಿದ್ದು, ವಸ್ತುಶ: ಬೀದಿಗೆ ಬಿದ್ದಿದ್ದೇವೆ. ಅತ್ತ ಬ್ಯಾಂಕ್ ಸಾಲಕ್ಕೆ ಪ್ರತಿ ತಿಂಗಳು ಕಟ್ಟಬೇಕಾದ ಬಡ್ಡಿ, ಇತ್ತ ಇರುವ ಮನೆಗೆ ಬಾಡಿಗೆ ಕಟ್ಟಬೇಕಾದ ಅನಿವಾರ್ಯತೆಯಿಂದ ನಾವು ಬಸವಳಿದಿದ್ದೇವೆ ಎಂದು ಧರಣಿಯಲ್ಲಿ ಭಾಗಿಯಾಗಿದ್ದ ಮಹಿಳೆಯರು ಕಳೆದೆರಡು ವರ್ಷಗಳ ತಮ್ಮ ದಯನೀಯ ಸ್ಥಿತಿಯನ್ನು ತೆರೆದಿಟ್ಟರು.
ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್‌ನ 9 ಎಕರೆ ಸರಕಾರಿ ನಿವೇಶನ ಸ್ಥಳದಲ್ಲಿ ಸರಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯ ವಸತಿ ಇಲಾಖೆಯ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಮೂಲಕ ನಿರ್ಮಿಸಲಾಗುತ್ತಿರುವ (ಒಟ್ಟು 840 ನಿವಾಸಗಳು) ಸುಮಾರು 240 ಸುಸಜ್ಜಿತ ವಸತಿ ಸಮುಚ್ಛಯ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿ ವರ್ಷ 4 ಕಳೆದಿದ್ದರೂ, ಪೂರ್ಣಗೊಂಡು ಇನ್ನೂ ಫಲಾನುಭವಿಗಳಿಗೆ ಹಸ್ತಾಂತರವಾಗಿಲ್ಲ ಎಂದು ನಿವಾಸಿಗಳ ಪರವಾಗಿ ಹೋರಾಟವನ್ನು ಸಂಘಟಿಸಿರುವ ಉಡುಪಿ ನಗರಸಭಾ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಯ ಸಂಚಾಲಕ ವೆಂಕಟೇಶ್ ಕೋಣಿ ತಿಳಿಸಿದರು.
ಫಲಾನುಭವಿಗಳು ತಮ್ಮ ಪಾಲಿನ ಮಾರ್ಜಿನ್ ಹಣ 90,000 ರೂ.ವನ್ನು (ಪರಿಶಿಷ್ಟಜಾತಿ/ಪಂಗಡದವರಿಗೆ 60,000ರೂ.) ಪಾಲು ಹಣವಾಗಿ ಸಂಬಂಧಪಟ್ಟ ಇಲಾಖೆಗೆ ಕಟ್ಟಿದ್ದಾರೆ. ಬ್ಯಾಂಕ್‌ನ ಸಹಾಯ ಧನದೊಂದಿಗೆ ಸಾಲ ಸೌಲಭ್ಯ ಪಡೆದು ವಸತಿ ಸಮುಚ್ಚಯ ಕಟ್ಟಡಕ್ಕೆ ಕಳೆದ ಮಾರ್ಚ್‌ನಲ್ಲೇ ಹಕ್ಕುಪತ್ರ ಪಡೆಯಲಾಗಿದ್ದರೂ, ಪಲಾನುಭವಿ ನಿವಾಸಿಗಳು ವಾಸ ಮಾಡಲು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ವಸತಿ ಸಮುಚ್ಛಯ ಅವ್ಯವಸ್ಥೆಗಳ ಆಗರವಾಗಿದೆ ಎಂಬುದು ಅವರ ದೂರಾಗಿದೆ.
ಇದೀಗ ಮೊದಲ ಹಂತದಲ್ಲಿ ವಸತಿ ಸಮುಚ್ಛಯದ 240 ನಿವಾಸಗಳ ಕಾಮಗಾರಿ ಕೊನೆಯ ಹಂತದಲ್ಲಿದೆ. ಇವುಗಳಿಗೆ ಕುಡಿಯುವ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ಪಕ್ಕಾ ಸಂಪರ್ಕ ರಸ್ತೆ, ದಾರಿದೀಪ, ಸಹಾಯ ಧನದೊಂದಿಗೆ ಬ್ಯಾಂಕ್ ಸಾಲ ಪಡೆಯುವಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಅವರು ಪೌರಾಯುಕ್ತರನ್ನು ಒತ್ತಾಯಿಸಿದರು.
ಸಾಲಕ್ಕೆ ಬಡ್ಡಿ ಕಟ್ಟುತಿದ್ದೇವೆ: ಚಿಕ್ಕದಾದರೂ ಸ್ವಂತದ್ದಾದ ಮನೆಯೊಂದನ್ನು ಪಡೆಯುವ ಆಸೆಯೊಂದಿಗೆ ಬ್ಯಾಂಕಿನಿಂದಲೇ ಸಾಲ ಮಾಡಿ ನಮ್ಮ ಪಾಲಿನ 90,000ರೂ.ಗಳನ್ನು ಕಟ್ಟಿದ್ದೇವೆ. ಅಲ್ಲದೇ ಬ್ಯಾಂಕ್ 3.08 ಲಕ್ಷ ರೂ. ಸಾಲ ನಮ್ಮ ಹೆಸರಿ ನಲ್ಲಿ ಮಂಜೂರು ಮಾಡಿ ನೀಡಿದೆ. ಕಳೆದೊಂದು ವರ್ಷದಿಂದ ಈ ಸಾಲಕ್ಕೆ ಬಡ್ಡಿ ಕಟ್ಟುವಂತೆ ಬ್ಯಾಂಕಿನಿಂದ ನೋಟೀಸು ಬರುತ್ತಿದೆ. ಇದಕ್ಕೆ ಬ್ಯಾಂಕಿಗೆ 2,600ರೂ.ನಿಂದ 3,800ರೂ.ವರೆಗೆ ಪ್ರತಿ ತಿಂಗಳ ಕಟ್ಟಬೇಕು. ನಾವು ಈಗ ಇರುವ ಮನೆಗೂ 7-8ಸಾವಿರ ರೂ. ಬಾಡಿಗೆ ಕಟ್ಟಬೇಕಾಗಿದೆ ಎಂದು ಫಲಾನುಭವಿಗಳಾದ ಸುಪ್ರಿತಾ, ಸೌಮ್ಯ, ನಾಗರತ್ನ, ಅಶೋಕ್ ಅವರು ದೂರಿಕೊಂಡರು.
ಅಲ್ಲದೇ ನಮ್ಮಿಂದ ಕರೆಂಟ್‌ಗೆಂದು 5000ರೂ., ನೀರಿಗೆಂದು 2000ರೂ. ಗಳನ್ನೂ ವಸೂಲಿ ಮಾಡಿದ್ದಾರೆ. ಆದರೆ ಇನ್ನೂ ಮನೆಯನ್ನು ಪೂರ್ಣಗೊಳಿಸಿ ನಮಗೆ ನೀಡಿಲ್ಲ. ಬಡವರಾದ ನಮಗೆ ಇದನ್ನೆಲ್ಲಾ ಭರಿಸಲು ಸಾಧ್ಯವೇ, ಮಕ್ಕಳ ಶಿಕ್ಷಣಕ್ಕೂ ವ್ಯವಸ್ಥೆ ಮಾಡಬೇಕು. ಒಟ್ಟಾರೆ ನಮ್ಮ ಪರಿಸ್ಥಿತಿ ಶತ್ರುಗಳಿಗೂ ಬೇಡ ಎಂದು ನಾಗರತ್ನ ನುಡಿದರು.
ಡಿಸೆಂಬರ್ ವೇಳೆಗೆ ಸಿದ್ಧ: ಫಲಾನುಭವಿಗಳ ಪರಿಸ್ಥಿತಿಯನ್ನು ವಿವರಿಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಅವರು ಮುಂದಿನ ಡಿಸೆಂಬರ್‌ವರೆಗೆ ಕಾಲಾವಕಾಶ ಕೋರಿದ್ದು, ಡಿಸೆಂಬರ್‌ಗೆ ಕಾಮಗಾರಿಯನ್ನು ಮುಗಿಸಿ ನಿವಾಸವನ್ನು ಪ್ರತಿಯೊಬ್ಬರಿಗೂ ಹಸ್ತಾಂತರಿಸುವ ಭರವಸೆ ನೀಡಿದ್ದಾರೆ ಎಂದು ವೆಂಕಟೇಶ್ ಕೋಣಿ ತಿಳಿಸಿದರು.
"ಶಾಸಕರ ಮಾತನ್ನು ನಂಬಿ ನಾನು ಕಳೆದ ಮಾರ್ಚ್ ತಿಂಗಳಲ್ಲೇ ಮನೆ ಸಿದ್ಧವಾಗುವುದೆಂದು ಭಾವಿಸಿ, ಮೇ ತಿಂಗಳಲ್ಲಿ ಮನೆ ಬಿಡುವುದಾಗಿ ಮಾಲಕರಿಗೆ ತಿಳಿಸಿದ್ದೆ. ಆದರೆ ಈಗ ನನಗೆ ಮಾಲಕರು ಪ್ರತಿದಿನ ಮನೆ ಯಾವಾಗ ಬಿಡುತ್ತಿ ಎಂದು ಕೇಳುತಿದ್ದಾರೆ. ನಾನು ಅವರಿಗೇನು ಹೇಳಲಿ".
- ಸುಪ್ರಿತಾ, ಚಿಟ್ಪಾಡಿ
"ನಾನು ಕಳೆದ ನವೆಂಬರ್‌ನಲ್ಲೇ ಬಾಡಿಗೆ ಮನೆಯನ್ನು ಬಿಟ್ಟಿದ್ದೆ. ವಸತಿ ಸಮುಚ್ಛಯ ಕಾಮಗಾರಿ ಮುಗಿಯದ ಕಾರಣ, ಈಗ ಅಕ್ಕನ ಮನೆಯಲ್ಲಿದ್ದೇನೆ. ಯಾವಾಗ ಸ್ವಂತ ಮನೆಗೆ ಹೋಗುತ್ತೇನೆ ಎಂದು ನನಗೇ ಗೊತ್ತಿಲ್ಲ".
-ಇಂದಿರಾ, ಕಾಜರಗುತ್ತು







