ಕಾಸರಗೋಡು ಚಿನ್ನಾರಿಗೆ ‘ಶಾರದಾ ಕೃಷ್ಣ’ ಪ್ರಶಸ್ತಿ

ಉಡುಪಿ, ನ.24:ಹೆಬ್ರಿಯ ಶ್ರೀರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ನೀಡುವ ‘ಶಾರದಾ ಕೃಷ್ಣ’ ಪ್ರಶಸ್ತಿಗೆ ಕನ್ನಡದ ಹಿರಿಯ ಕಲಾವಿದ, ನಿರ್ದೇಶಕ, ಸಂಘಟಕ, ಚಲನಚಿತ್ರ ನಟ ಕಾಸರಗೋಡು ಚಿನ್ನಾ ಆಯ್ಕೆಯಾಗಿದ್ದಾರೆ.
ಮುಂದಿನ ಜನವರಿ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಹಾಗೂ 25,000ರೂ. ನಗದನ್ನು ಒಳಗೊಂಡಿರುತ್ತದೆ ಎಂದು ಪ್ರಶಸ್ತಿಯ ಸಂಚಾಲಕರಾದ ವಿವೇಕಾನಂದ ಎನ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಗಡಿನಾಡು ಕಾಸರಗೋಡಿನವರಾದ ಶ್ರೀನಿವಾಸ ರಾವ್ ಎಸ್. ಅವರು ಕಾಸರಗೋಡು ಚಿನ್ನಾ ಎಂದೇ ಪರಿಚಿ ತರು. ಪದವಿಯ ಬಳಿಕ ಬೆಂಗಳೂರಿನ ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನಿಂದ ಡಿಪ್ಲೋಮಾದಲ್ಲಿ ಚಿನ್ನದ ಪದಕ ಪಡೆದ ಚಿನ್ನಾ ಅವರು ಸಂಘಟಕರಾಗಿ, ನಟನಾಗಿ, ರಂಗ ನಿರ್ದೇಶಕರಾಗಿ, ಚಲನಚಿತ್ರ ನಿರ್ದೇಶಕರಾಗಿ ಚಿರಪರಿಚಿತರು.
ಕನ್ನಡ, ತುಳು, ಕೊಂಕಣಿ ಮಲಯಾಳಂ, ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸಿ ನಾಟಕಗಳನ್ನು ನಿರ್ದೇಶಿಸಿ ಜನಪ್ರಿಯತೆ ಗಳಿಸಿದ್ದಾರೆ. ರಂಗ ಚಿನ್ನಾರಿ ಎಂಬ ಸಂಸ್ಥೆಯನ್ನು ಕಟ್ಟಿ, ಹಲವು ಕನ್ನಡದ ಕೆಲಸಗಳನ್ನು ನಿರಂತರವಾಗಿ ಕಾಸರಗೋಡು ಪರಿಸರದಲ್ಲಿ ನಡೆಸುತ್ತಿದ್ದಾರೆ.







