ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸಿ: ಮಂಗಳೂರು ವಿವಿ ವಿಸಿ ಪ್ರೊ.ಅಮೀನ್

ಉದ್ಯಾವರ, ನ.27: ನಮ್ಮ ನಡುವಿನ ಮಕ್ಕಳಲ್ಲಿ ಸೃಜನಶೀಲತೆ ಈಗಲೂ ಇದೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ. ಮಕ್ಕಳು ಕೇವಲ ಟಿವಿ, ಮೊಬೈಲ್‌ಗಳಲ್ಲಿ ಮುಳುಗಿರದೇ, ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿ ಭಾಗವಹಿಸುತ್ತಾರೆ ಎಂದು ಮಂಗಳೂರು ವಿವಿ ಕುಲಪತಿಗಳಾದ ಪ್ರೊ.ಜಯರಾಜ್ ಅಮೀನ್ ಅಭಿಪ್ರಾಯ ಪಟ್ಟಿದ್ದಾರೆ.
ಉದ್ಯಾವರದ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ರವಿವಾರ ಜರಗಿದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಸಾಮೂಹಿಕ ನೃತ್ಯ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಇಲ್ಲಿ ನೃತ್ಯ ಮಾಡಲು ವೇದಿಕೆಗೆ ಆಗಮಿಸುವ ಮಕ್ಕಳ ಮುಖದಲ್ಲಿ ಕಾಣುವ ಉತ್ಸಾಹ, ಸಂತೋಷ ಬಹಳ ಮುಖ್ಯ ಅನಿಸುತ್ತದೆ ಎಂದ ಅವರು, ಮಕ್ಕಳು ಕೇವಲ ಟಿವಿ, ಮೊಬೈಲ್‌ಗಳಲ್ಲೇ ಮಗ್ನರಾಗಿರುತ್ತಾರೆ ಎಂಬುದನ್ನು ಈ ಕಾರ್ಯಕ್ರಮ ಸುಳ್ಳು ಮಾಡಿದೆ ಎಂದರು.
ಸಮಾರೋಪ ಭಾಷಣಮಾಡಿದ ಖ್ಯಾತ ನೃತ್ಯಪಟು ಹಾಗೂ ಮಂಗಳೂರು ನಾದ ನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು ಕಲ್ಚರಲ್ ಟ್ರಸ್ಟ್‌ನ ನಿರ್ದೇಶಕಿ ಭ್ರಮರಿ ಶಿವಪ್ರಕಾಶ್ ಅವರು ಭರತನಾಟ್ಯ, ಜಾನಪದ, ಸಮಕಾಲೀನ, ಯಕ್ಷಗಾನ ಯಾವುದೇ ನೃತ್ಯ ಪ್ರಕಾರವಿರಲಿ ದೇಹದ ಅಂಗಾಂಗ ಚಲನೆಯ ಮೂಲಕ ಅದು ಖುಷಿಯನ್ನು ನೀಡುತ್ತದೆ. ಭಾವನೆಗಳ ಮೂಲಕ ಅದು ಮನಸ್ಸನ್ನು ತಟ್ಟುವಾಗ ಭಾವ ಪ್ರಚೋದನೆಯಾಗುತ್ತದೆ. ಭಾವನಾತ್ಮಕ ಕುಶಲತೆ ದೊರೆಯುತ್ತದೆ ಎಂದರು.
ನಮ್ಮ ಅನುಭವಕ್ಕೆ ಬರುವುದನ್ನು ಮುಖಭಾವ ಮತ್ತು ದೇಹದ ಚಲನೆಯ ಮೂಲಕ ಅಭಿವ್ಯಕ್ತಿಗೊಳಿಸಿ ಬೌದ್ಧಿಕ ಕುಶಲತೆಯನ್ನು ಗಳಿಸಬಹುದು. ಹಾಗಾಗಿ ನೃತ್ಯ ಮಕ್ಕಳ ಸರ್ವಾಂಗೀಣ ಬೆಳೆವಣಿಗೆಗೆ ಪೂರಕವಾಗಿದೆ ಮತ್ತು ನೃತ್ಯದ ಮೂಲಕ ಮಕ್ಕಳು ಸಮಾಜಕ್ಕೆ ಒಂದು ಧನಾತ್ಮಕ ಸಂದೇಶ ನೀಡಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಹಾಗೂ ಉದ್ಯಾವರ ಹಲೀಮಾ ಸಾಬ್ಜು ಚಾರಿಟೇಬಲ್ ಟ್ರಸ್ಟ್‌ನ ಆಡಳಿತ ನಿರ್ದೇಶಕ ಅಬ್ದುಲ್ ಜಲೀಲ್ ಸಾಹೇಬ್ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ತಿಲಕ್ ರಾಜ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ, ನಿರ್ದೇಶಕರಾದ ಪದ್ಮನಾಭ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧನಂಜಯ ಶೇರಿಗಾರ್ ಅತಿಥಿಗಳನ್ನು ಸ್ವಾಗತಿಸಿದರೆ ಸುಹೇಲ್ ರಹಮತ್ ವಂದಿಸಿದರು. ಮಾಜಿ ಅಧ್ಯಕ್ಷ ಅನುಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.







