ಕೋಟದಲ್ಲಿ ಉಡುಪಿ ಜಿಲ್ಲಾ ಕಸಾಪ ಸಮ್ಮೇಳನ ‘ಅನುಸಂಧಾನ’
ಹೊರನಾಡ ಕನ್ನಡಿಗ ಬಾಬು ಶಿವಪೂಜಾರಿ ಸಮ್ಮೇಳನಾಧ್ಯಕ್ಷ

ಬಾಬು ಶಿವಪೂಜಾರಿ
ಉಡುಪಿ, ಡಿ.1: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 16ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ಅನುಸಂಧಾನ’ ಇದೇ ಡಿ.5 ಮತ್ತು 6ರಂದು ಕೋಟ ವಿವೇಕ ವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರನಾಡ ಕನ್ನಡಿಗ, ಮುಂಬಯಿಯ ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಕೋಟ ವಿವೇಕ ವಿದ್ಯಾಸಂಸ್ಥೆಗಳ ಅಮೃತ ಮಹೋತ್ಸವ ಸಮಾರಂಭ ‘ಅಮೃತ ಪರ್ವ’ ಡಿ.2ರಿಂದ 6ರವರೆಗೆ ಅಲ್ಲೇ ನಡೆಯಲಿದ್ದು, ಇದರ ಅಂಗವಾಗಿಯೇ ಕೊನೆಯ ಎರಡು ದಿನಗಳಲ್ಲಿ ಶೈಕ್ಷಣಿಕ ಹಬ್ಬದೊಂದಿಗೆ ಸಾಹಿತ್ಯ ಹಬ್ಬವೂ ನಡೆಯಲಿದೆ ಎಂದರು.
ಡಿ.5ರಂದು ಬೆಳಗ್ಗೆ 9:15ರಿಂ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದಿಂದ ವಿವೇಕ ವಿದ್ಯಾಸಂಸ್ಥೆಯವರೆಗೆ ಪುರಮೆರವಣಿಗೆ ನಡೆಯಲಿದ್ದು, ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್. ಕಾರಂತ ಚಾಲನೆ ನೀಡು ವರು ಎಂದರು.
ಬೆಳಗ್ಗೆ 10:15ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ಅವರು ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸುವರು. ಬಾಬು ಶಿವ ಪೂಜಾರಿ ಸಮ್ಮೇಳನಾಧ್ಯಕ್ಷರಾಗಿರುವರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರೆ, ಪುಸ್ತಕ ಮಳಿಗೆಯನ್ನು ಕೋಟ ವಿದ್ಯಾ ಸಂಘದ ಅಧ್ಯಕ್ಷ ಪಿ.ಪ್ರಭಾಕರ ಮಯ್ಯ ಉದ್ಘಾಟಿಸುವರು.
ಸಮ್ಮೇಳನದ ವೇಳೆ ಒಟ್ಟು 12 ಪುಸ್ತಕಗಳು ಬಿಡುಗಡೆಗೊಳ್ಳಲಿದ್ದು, ಕಸಾಪದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಇವುಗಳನ್ನು ಲೋಕಾರ್ಪಣೆ ಗೊಳಿಸುವರು. ಇವುಗಳಲ್ಲಿ ಏಳು ನೀಲಾವರ ಸುರೇಂದ್ರ ಅಡಿಗ ಅವರ ಕೃತಿಗಳಾಗಿವೆ. ಉಳಿ ದಂತೆ ಭಾರತಿ ಮರವಂತೆ, ವಿಠಲ್ ಪೂಜಾರಿ, ವಂದಗದ್ದೆ ಗಣೇಶ, ಸಿ.ಉಪೇಂದ್ರ ಸೋಮಯಾಜಿ ಹಾಗೂ ಬಿ.ವಿ.ಕೆದ್ಲಾಯರ ಕೃತಿಗಳಿವೆ.
ಈ ಬಾರಿ ಎರಡು ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಅಪರಾಹ್ನ 2ಗಂಟೆಗೆ ಕೆ.ಸುಬ್ರಹ್ಮಣ್ಯ ಶೆಟ್ಟಿ ಹಾಗೂ ಡಿ.6ರಂದು ಬೆಳಗ್ಗೆ 10ಗಂಟೆಗೆ ಸುಧಾ ಅಡುಕಳ ಅವರ ಅಧ್ಯಕ್ಷತೆಯಲ್ಲಿ ಈ ಗೋಷ್ಠಿಗಳು ನಡೆಯಲಿವೆ ಎಂದು ಅಡಿಗ ತಿಳಿಸಿದರು.
ಮೊದಲ ದಿನ ಅಪರಾಹ್ನ 3ಕ್ಕೆ ಮನು ಹಂದಾಡಿ ಅವರ ನೇತೃತ್ವದಲ್ಲಿ ಹ್ವಾಯ್ ಕುಂದಾಪ್ರ ಕನ್ನಡ ಭಾಷಿ ಅಲ್ಲ, ಬದುಕು ವಿಚಾರಗೋಷ್ಠಿ ನಡೆಯಲಿದೆ. ಬಳಿ ಕೋಟ ಲಕ್ಷ್ಮೀನಾರಾಯಣ ಕಾರಂತರ ಕುರಿತು, ಆಡಳಿತದಲ್ಲಿ ಕನ್ನಡದ ಕುರಿತು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗು ವುದು ಎಂದರು.
ಡಿ.5ರ ಸಂಜೆ ಆರು ಗಂಟೆಗೆ ಡಾ.ಶಿವರಾಮ ಕಾರಂತರ ಕಾದಂಬರಿ ಆಧಾರಿತ ‘ಚೋಮನ ದುಡಿ’ ನಾಟಕವನ್ನು ಬೈಂದೂರಿನ ಸುರಭಿ ತಂಡ ಗಣೇಶ ಮಂದಾರ್ತಿ ಇವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಲಿದೆ ಎಂದು ನೀಲಾವರ ಸುರೇಂದ್ರ ಅಡಿಗ ತಿಳಿಸಿದರು.
ಎರಡನೇ ದಿನದಂದು ಕವಿಗೋಷ್ಠಿಯ ಬಳಿಕ 11:00ಕೆ ಸಮ್ಮೇಳನಾ ಧ್ಯಕ್ಷರೊಂದಿಗೆ ಮಾತುಕತೆ, ಶಿಕ್ಷಣದ ಕುರಿತು ವಿಚಾರಗೋಷ್ಠಿ, ವಿದ್ಯಾರ್ಥಿಗಳ ಬಹುವಿಧ ಗೋಷ್ಠಿ, ಯಕ್ಷಗಾನ ಕುರಿತ ವಿಚಾರಗೋಷ್ಠಿ ನಡೆಯಲಿದೆ. ಅಪರಾಹ್ನ 3:00ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು, 3:30ರಿಂದ ಜಿಲ್ಲಾ ಕಸಾಪ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭಹ ನಡೆಯಲಿದೆ. ಕಾಪುವಿನ ಸಾಹಿತ್ಯಿಕ ಚಿಂತಕ ರಾಘವೇಂದ್ರ ರಾವ್ ಇವರು ಸಮಾರೋಪ ಭಾಷಣ ಮಾಡಲಿದ್ದಾರೆ. ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನವೂ ಇದೇ ಸಂದರ್ಭದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ಕೋಟ ನರೇಂದ್ರಕುಮಾರ್, ಕೋಶಾಧ್ಯಕ್ಷರಾದ ಮನೋಹರ ಪಿ., ಸದಸ್ಯರಾದ ಭುವನಪ್ರಸಾದ ಹೆಗ್ಡೆ ಹಾಗೂ ನರಸಿಂಹ ಮೂರ್ತಿ ಉಪಸ್ಥಿತರಿದ್ದರು.
ಬಾಬು ಶಿವ ಪೂಜಾರಿ
ಉಡುಪಿ ಜಿಲ್ಲಾ 16ನೇ ಕಸಾಪ ಸಮ್ಮೇಳನ ‘ಅನುಸಂಧಾನ’ದ ಅಧ್ಯಕ್ಷರಾಗಿ ಆಯ್ಕೆಯಾದ ಬಾಬು ಶಿವ ಪೂಜಾರಿ ಹೊಸನಾಡ ಕನ್ನಡಿಗರು. ಸಾಹಿತಿ ಹಾಗೂ ಸಂಶೋಧಕರು. ಹೊಟೇಲ್ ಉದ್ಯಮಿಯಾಗಿರುವ ಬಾಬು ಶಿವ ಪೂಜಾರಿ ವೇದ, ಆಧುನಿಕ ಸಾಹಿತ್ಯ, ಬೌದ್ಧ, ಜೈನ, ಇಸ್ಲಾಂ ಮತ್ತು ಬೈಬಲ್ ಧರ್ಮಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದ್ದಾರೆ.
ನಾರಾಯಣ ಗುರುಗಳ ಆದರ್ಶ, ನಾರಾಯಣ ಗುರು ವಿಜಯ ದರ್ಶನ, ಅನುಸಂಧಾನ, ಹಗ್ಗಿನ ಹನಿ ಮುಂತಾದವರು ಇವರ ಕೃತಿ. ಕೋಟಿಚೆನ್ನಯ್ಯ, ತುಳು ಸಂಸ್ಕೃತಿ, ಸಿರಿ, ನಾಗಾರಾಧನೆ, ಭೂತಾರಾಧನೆ, ತುಳುನಾಡಿನ ಗರಡಿ ಗಳ ಕುರಿತು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.







