ಕನಿಷ್ಟ ಕೂಲಿ, ತುಟ್ಟಿ ಭತ್ಯೆಗಾಗಿ ಬೀಡಿ ಕಾರ್ಮಿಕರ ಧರಣಿ

ಕುಂದಾಪುರ, ಡಿ.2: ರಾಜ್ಯದಲ್ಲಿರುವ ಬೀಡಿ ಕಾರ್ಮಿಕರಿಗೆ ತುಟ್ಟಿ ಭತ್ಯೆ ಹಾಗೂ ಕನಿಷ್ಠ ಕೂಲಿಯನ್ನು ನಿರಾಕರಿಸುತ್ತಿರುವು ದನ್ನು ಖಂಡಿಸಿ ಬೀಡಿ ಕಾರ್ಮಿಕರ ರಾಜ್ಯ ವ್ಯಾಪಿ ಹೋರಾಟದ ಅಂಗವಾಗಿ ಕುಂದಾಪುರ ಬೀಡಿ ವರ್ಕರ್ಸ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ಇಂದು ಕುಂದಾಪುರ ತಹಸಿಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿ, ಬೀಡಿ ಕಾರ್ಮಿಕರ 2015ರಿಂದ 2018ರವರೆಗಿನ ಬಾಕಿ ಇರುವ ತುಟ್ಟಿ ಭತ್ಯೆ ಜಾರಿ ಗಳಿಸಲು ಸರಕಾರ ಮದ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಬೀಡಿ ಮಾಲೀಕರು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಿನ ಆದೇಶದ ಪಾಲನೆ ಮಾಡದೆ ತುಟ್ಟಿ ಭತ್ಯೆ ನಿರಾಕರಿಸುವುದು ಕಾರ್ಮಿಕರಿಗೆ ಮಾಡಿದ ವಂಚನೆ ಎಂದು ಆರೋಪಿಸಿದರು.
ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ. ಮಾತನಾಡಿ, 1000 ಬೀಡಿಗೆ 400 ರೂ. ಕನಿಷ್ಟ ಕೂಲಿ ನೀಡ ಬೇಕು. ಭವಿಷ್ಯ ನಿಧಿ ಕಚೇರಿಯು ಕಾರ್ಮಿಕರ ದಾಖಲೆಗಳನ್ನು ಆಧಾರ್‌ನಲ್ಲಿರುವಂತೆ ತಿದ್ದುಪಡಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಮಹಾಬಲ ವಡೆರಹೋಬಳಿ ಮಾತನಾಡಿದರು. ಉಪ ತಶೀಲ್ದಾರ್ ವಿನಯ್ ಮನವಿ ಸ್ವೀಕರಿಸಿದರು. ಧರಣಿಯಲ್ಲಿ ಮುಖಂಡರಾದ ಬಲ್ಕಿಸ್, ಗಿರಿಜಾ, ರತ್ನ ಗುಲ್ವಾಡಿ, ಸಣ್ಣಮ್ಮ, ಶಾರದ, ಪದ್ದು ಗಿರಿಜಾ ಕಂಡ್ಲೂರು ಮೊದಲಾದವರು ಉಪಸ್ಥಿತರಿದ್ದರು.







