ಕ್ರೀಡೆಯಿಂದ ವಿಶೇಷ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಳ: ಡಿಸಿ ವಿದ್ಯಾಕುಮಾರಿ
ಉಡುಪಿ ಜಿಲ್ಲಾ ಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟಕಕ್ಕೆ ಚಾಲನೆ

ಉಡುಪಿ: ವಿಶೇಷ ಚೇತನ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಪೋಷಕರು ಮಾಡಬೇಕು. ಆ ಕಾರ್ಯ ಕ್ರೀಡೆಯಿಂದ ದೊರೆಯಲು ಸಾಧ್ಯವಾಗುತ್ತದೆ. ಆದುದರಿಂದ ವಿಶೇಷ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳುವ ಮೂಲಕ ಅವರಿಗೆ ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಲಯನ್ಸ್ ಕ್ಲಬ್ ಅಮೃತ್ ಇವುಗಳ ಸಂಯುಕ್ಕ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ವಿಶೇಷ ಮಕ್ಕಳ ಕ್ರೀಡಾಕೂಟ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿಶೇಷ ಚೇತನ ಮಕ್ಕಳನ್ನು ಮನೆಯ ನಾಲ್ಕು ಗೋಡೆಗಳ ಒಳಗೆ ಕೂಡಿ ಹಾಕದೆ ಅವರಿಗೆ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಅವರಿಂದ ಸಾಧನೆ ಗಳನ್ನು ನಿರೀಕ್ಷಿಸಬಹುದಾಗಿದೆ. ಅವರನ್ನು ಅವಕಾಶ ವಂಚಿತರನ್ನಾಗಿ ಮಾಡದೆ ಅವಕಾಶ ಒದಗಿಸಿಕೊಡಬೇಕು. ಇದರಿಂದ ಅವರು ಬೇರೆ ಮಕ್ಕಳೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು, ಲಯನ್ಸ್ ಕ್ಲಬ್ ಉಡುಪಿ ಅಮೃತ್ ಅಧ್ಯಕ್ಷೆ ಭಾರತೀ ಹರೀಶ್, ಲಯನ್ಸ್ ಪ್ರಾದೇಶಿಕ ಅಧ್ಯಕ್ಷೆ ಗಿರಿಜಾ ಶಿವರಾಮ್ ಶೆಟ್ಟಿ, ಕಾಲೇಜಿನ ಪ್ರಭಾರ ಪ್ರಾಂಶು ಪಾಲ ನಿತ್ಯಾನಂದ ಗಾಂವ್ಕರ್ ಮಾತನಾಡಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರರ ಸಂಘದ ಗೌರವಾಧ್ಯಕ್ಷೆ ಆ್ಯಗ್ನೇಸ್ ಕುಂದರ್, ರಾಜ್ಯಾಧ್ಯಕ್ಷೆ ಕಾಂತಿ ಹರೀಶ್, ಉಡುಪಿ ಜಿಲ್ಲಾಧ್ಯಕ್ಷ ರವೀಂದ್ರ ಎಚ್. ಉಪಸ್ಥಿತರಿದ್ದರು.
ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿ ಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲೆಯ 10 ವಿಶೇಷ ಮಕ್ಕಳ ಶಾಲೆಯ ಸುಮಾರು 300 ಮಕ್ಕಳು ಪಾಲ್ಗೊಂಡಿದ್ದರು.







