ಮಂಗಳೂರು ವಿವಿ ಅಂತರ್ ಕಾಲೇಜು ಅಥ್ಲೆಟಿಕ್ ಚಾಂಪಿಯನ್‌ಶಿಪ್: ಮೂಡುಬಿದಿರೆ ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

ಉಡುಪಿ, ಡಿ.6: ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತೆಂಕನಿಡಿ ಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಲಯನ್ಸ್ ಕ್ಲಬ್ ಅಮೃತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಮಂಗಳೂರು ವಿವಿ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.
ಸಮಗ್ರ ಪ್ರಶಸ್ತಿಯಲ್ಲಿ ಆಳ್ವಾಸ್ ಒಟ್ಟು 506 ಅಂಕದೊಂದಿಗೆ ಪ್ರಥಮ, ಉಜಿರೆ ಎಸ್‌ಡಿಎಂ ಕಾಲೇಜು 66 ಅಂಕದೊಂದಿಗೆ ದ್ವಿತೀಯ ಮತ್ತು ವಾಮದ ಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು 51 ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಪುರುಷರ ವಿಭಾಗದಲ್ಲಿ ಬೆಸ್ಟ್ ಅಥ್ಲೆಟ್ ಪ್ರಶಸ್ತಿಯನ್ನು ಆಳ್ವಾಸ್‌ನ ಸನೀಶ್ ಪಿ.ಎಸ್. ಮತ್ತು ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ಅಂಜಲಿ ತನ್ನದಾಗಿಸಿಕೊಂಡರು.
ಪುರುಷರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು(259 ಅಂಕ) ಪ್ರಥಮ, ಉಜಿರೆ ಎಸ್‌ಡಿಎಂ ಕಾಲೇಜು(50) ದ್ವಿತೀಯ, ಪುತ್ತೂರು ವಿವೇಕಾನಂದ ಕಾಲೇಜು(16) ತೃತೀಯ ಮತ್ತು ವಾಮದ ಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು(15) ನಾಲ್ಕನೆ ಸ್ಥಾನ ಪಡೆದುಕೊಂಡಿದೆ.
ಮಹಿಳೆಯರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು (247 ಅಂಕ) ಪ್ರಥಮ, ಉಡುಪಿ ಡಾ.ಜಿ.ಶಂಕರ್ ಮಹಿಳಾ ಪದವಿ ಕಾಲೇಜು (56) ದ್ವಿತೀಯ, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು(35) ತೃತೀಯ ಮತ್ತು ಉಡುಪಿ ಎಂಜಿಎಂ ಕಾಲೇಜು(23) ನಾಲ್ಕನೆ ಸ್ಥಾನ ತನ್ನದಾಗಿಸಿ ಕೊಂಡಿದೆ.
ಸಮಾರೋಪ: ಬುಧವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು.
ಈ ಕ್ರೀಡಾಕೂಟದಲ್ಲಿ ನೂತನ ದಾಖಲೆ ನಿರ್ಮಿಸಿದ ಆರು ಮಂದಿ ವಿದ್ಯಾರ್ಥಿಗಳಿಗೆ ಡಾ.ಮೋಹನ್ ಆಳ್ವ ಪ್ರಾಯೋಜಕತ್ವ ತಲಾ 5 ಸಾವಿರ ರೂ. ನಗದು ಬಹುಮಾನವನ್ನು ವಿತರಿಸಲಾಯಿತು.
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್ ಮಾತನಾಡಿದರು. ಲಯನ್ಸ್ ಕ್ಲಬ್ ಉಡುಪಿ ಅಮೃತ್ ಅಧ್ಯಕ್ಷೆ ಭಾರತಿ ಹರೀಶ್, ಸಪಲ್ಯ ಟ್ರಸ್ಟ್ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ರಾಷ್ಟ್ರೀಯ ಕ್ರೀಡಾಪಟು ಮಣಿಕಂಠ, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಶೇಷಪ್ಪ ಗೌಡ ಉಪಸ್ಥಿತರಿದ್ದರು.
ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಉದಯ ಶೆಟ್ಟಿ ವಂದಿಸಿದರು.
ಕೊನೆಯ ದಿನ ಮತ್ತೆ 3 ನೂತನ ದಾಖಲೆ
ಚಾಂಪಿಯನ್‌ಶಿಪ್‌ನ ಕೊನೆಯ ದಿನವಾದ ಇಂದು ಎರಡೂ ವಿಭಾಗದಲ್ಲೂ ಒಟ್ಟು ಮೂರು ನೂತನ ದಾಖಲೆಯನ್ನು ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಸ್ಥಾಪಿಸಿದರು.
ಪುರುಷರ ವಿಭಾಗದ ಶಾಟ್‌ಪುಟ್‌ನಲ್ಲಿ ಆಳ್ವಾಸ್‌ನ ಸವನ್ 17.82 ಮೀಟರ್‌ಗಳ ಹೊಸ ದಾಖಲೆಯನ್ನು ತನ್ನ ಹೆಸರಿಗೆ ಬರೆದರೆ, ಮಹಿಳೆಯರ ವಿಭಾಗದ ಹ್ಯಾಮರ್ ಥ್ರೋನಲ್ಲಿ ಆಳ್ವಾಸ್‌ನ ಶ್ರುತಿ ಸಿಂಗ್ 56.20ಮೀಟರ್ ದೂರ ಎಸೆಯುವ ಮೂಲಕ ನೂತನ ದಾಖಲೆ ನಿರ್ಮಿಸಿದರು. ಅದೇ ರೀತಿ ಮಹಿಳೆಯರ ಪೊಲ್ ವಾಲ್ಟ್‌ನಲ್ಲಿ ಆಳ್ವಾಸ್‌ನ ಸಿಂಧುಶ್ರೀ 3.60ಮೀಟರ್‌ಗಳ ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ.







