ತಮ್ಮ ಚತುರ್ಥ ಪರ್ಯಾಯ ವಿಶ್ವ ಗೀತಾ ಪರ್ಯಾಯ: ಪುತ್ತಿಗೆ ಶ್ರೀ

ಉಡುಪಿ, ಡಿ.6: ತಾವು 2024ರ ಜ.18ರಿಂದ ನಡೆಸಲಿರುವ ಚತುರ್ಥ ಪರ್ಯಾಯವು ‘ವಿಶ್ವ ಗೀತಾ ಪರ್ಯಾಯ’ ವಾಗಿರುತ್ತದೆ. ಪ್ರತಿಯೊಬ್ಬರು ಆಂತರಿಕವಾಗಿ ಭಗವದ್ ಚಿಂತನೆ ನಡೆಸಬೇಕು ಎಂದು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಹೇಳಿದ್ದಾರೆ.
ಪುತ್ತಿಗೆ ಮಠದ ಸಭಾಂಗಣದಲ್ಲಿ ಪರ್ಯಾಯ ಪೂರ್ವಭಾವಿ ಧಾನ್ಯ ಮುಹೂರ್ತದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಬುಧವಾರ ಅವರು ಆಶೀರ್ವಚನ ನೀಡಿ ಮಾತನಾಡುತಿದ್ದರು.
ತಾವು ಈಗಾಗಲೇ ಒಂದು ಕೋಟಿ ಜಗರಿಂ ಭಗವದ್ಗೀತೆಯನ್ನು ಬರೆಸಿ ಅದನ್ನು ಭಗವಂತನಿಗೆ ಅರ್ಪಿಸುವ ಸಂಕಲ್ಪ ಮಾಡಿ ಕಾರ್ಯೊನ್ಮುಖ ನಾಗಿದ್ದೇನೆ. ಜಗತ್ತಿನ ಮೂಲೆಮೂಲೆಗೆ ಹೋಗಿ ಭಗವದ್ಗೀತೆಯ ಪ್ರಚಾರ ಕಾರ್ಯ ನಡೆಸಿದ್ದೇವೆ ಎಂದವರು ಹೇಳಿದರು.
ಪರ್ಯಾಯದಲ್ಲಿ ಸಂದರ್ಭದಲ್ಲಿ ದೇವರ ಸೇವೆ ಜತೆಗೆ ಭಕ್ತರ ಸೇವೆಯ ಅವಕಾಶ ಉಡುಪಿ ಜನರಿಗೆ ದೊರೆಯಲಿದೆ. ಈ ಬಾರಿ ಪರ್ಯಾಯದ ಒಂದು ಲಕ್ಷ ಆಮಂತ್ರಣ ಪತ್ರಿಕೆಯನ್ನು ಜಗತ್ತಿನಾದ್ಯಂತ ವಿತರಿಸುವ ಗುರಿಯನ್ನು ಹಾಕಿಕೊಂಡಿದ್ದೇವೆ. ಇದು ಶ್ರೀಕೃಷ್ಣನಿಂದ ಬಂದ ಅನುಗ್ರಹ ಪತ್ರ ಎಂದು ಭಾವಿಸಿ ಎಲ್ಲರೂ ಪರ್ಯಾಯದಲ್ಲಿ ಭಾಗವಹಿಸ ಬೇಕು ಎಂದು ಪುತ್ತಿಗೆಶ್ರೀಗಳು ಹೇಳಿದರು.
ಸಂಸ್ಕೃತಿ, ಸಂಸ್ಕಾರ ಉಳಿಸಿ: ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ ಎರಡು ವರ್ಷಗಳ ಪುತ್ತಿಗೆ ಪರ್ಯಾಯ ಸುಲಲಿತವಾಗಿ ನಡೆಯಲಿ. ಪರ್ಯಾಯಾವಧಿ ರಾಜ್ಯ ಮತ್ತು ದೇಶಕ್ಕೆ ಸುಭಿಕ್ಷೆಯನ್ನು ತರಲಿ. ನಾವೆಲ್ಲರೂ ಈ ಅವದಿಯಲ್ಲಿ ಪುತ್ತಿಗೆ ಶ್ರೀಗಳೊಂದಿಗೆ ಇರುತ್ತೇವೆ ಎಂದರು.
ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ಪೌರಾಯುಕ್ತ ರಾಯಪ್ಪ, ಪ್ರಸಾದ್‌ರಾಜ್ ಕಾಂಚನ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಭುವನೇಂದ್ರ ಕಿದಿಯೂರು, ಶ್ರೀರಮಣ ಉಪಾಧ್ಯ, ಸೂರ್ಯನಾರಾಯಣ ಉಪಾಧ್ಯ ಕುಂಭಾಶಿ, ಕರ್ನಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಉಪಸ್ಥಿತರಿದ್ದರು.
ಮಠದ ದಿವಾನ ನಾಗರಾಜ ಆಚಾರ್ಯ ಸ್ವಾಗತಿಸಿದರು. ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಪ್ರಾಸ್ತಾವಿಕ ಮಾತನ್ನಾಡಿದರು. ರಮೇಶ್ ಭಟ್ ಕೆ. ಕಾರ್ಯಕ್ರಮ ನಿರೂಪಿಸಿ ಬೆಳಪು ದೇವಿಪ್ರಸಾದ್ ಶೆಟ್ಟಿ ವಂದಿಸಿದರು.
ನವಧಾನ್ಯಗಳ ಸಮರ್ಪಣೆ
ಪುತ್ತಿಗೆ ಶ್ರೀಪಾದರು ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ನವಧಾನ್ಯಗಳ ಸಮರ್ಪಣೆಗೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಧಾನ್ಯ ಮುಡಿಗಳ ನಡುವೆ ಆಸೀನರಾಗಿದ್ದ ಪುತ್ತಿಗೆಶ್ರೀಗಳ ಮಾರ್ಗದರ್ಶನದಲ್ಲಿ ಅತಿಥಿಗಳು ತಟ್ಟೆಗೆ ನವಧಾನ್ಯ ಸಮರ್ಪಿಸಿದರು.







