ವಲಸೆ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಲು ಆಮ್ ಆದ್ಮಿ ಪಾರ್ಟಿ ಆಗ್ರಹ

ಕುಂದಾಪುರ, ಡಿ.7: ಕುಂದಾಪುರದ ಹೊರವಲಯದ ಗಾಂಧಿ ಮೈದಾನ, ಶಾಸ್ತ್ರಿ ಪಾರ್ಕ್ ಪರಿಸರದ ಫುಟ್‌ಪಾತ್, ಅಂಡರ್ ಪಾಸ್ ಮತ್ತು ಬಯಲಿನಲ್ಲಿ ರಾತ್ರಿ ಹೊತ್ತು ವಿಶ್ರಾಂತಿ ಪಡೆಯುವ ಉತ್ತರ ಕರ್ನಾಟಕ ಭಾಗದ ವಲಸೆ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಈ ಕುರಿತು ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ವಲಸೆ ಕಾರ್ಮಿಕರು ಎಲ್ಲೆಂದರಲ್ಲಿ ಮಲಗುವುದರಿಂದ ಅಪಘಾತಕ್ಕೂ ಕೂಡ ಆಹ್ವಾನ ನೀಡಿದ್ದು ಬಹಳ ಜನ ಪ್ರಾಣ ಕಳೆದುಕೊಂಡಿದ್ದಾರೆ. ಶುಚಿತ್ವದ ವ್ಯವಸ್ಥೆ, ಕಾನೂನು ಸುವ್ಯವಸ್ಥೆಗೆ ಇದು ತೊಡಕಾಗಿದೆ. ಮಹಿಳೆಯರು ಹಾಗೂ ಮಕ್ಕಳು ಇಲ್ಲಿಯೇ ನಿದ್ರಿಸುತ್ತಿದ್ದು ರಕ್ಷಣೆ ಇಲ್ಲದಂತಾಗಿದೆ. ಇಲ್ಲಿ ಕಾರ್ಮಿಕ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೀದಿ ದೀಪಗಳ ಅಡಿಯಲ್ಲಿ ಅಭ್ಯಾಸ ಮಾಡುವುದು ಕಂಡು ಬಂದಿದೆ. ಅವರು ವಲಸಿಗರಾಗಿ ನೆಲೆಸಿದ ಪ್ರದೇಶದಲ್ಲಿ ಶೌಚಾಲಯದ ಮತ್ತು ಸ್ನಾನಗೃಹ ಸಹಿತ ಯಾವುದೇ ಮೂಲಭೂತ ಸೌಕರ್ಯವಿಲ್ಲ. ಇದು ಮಾನವ ಹಕ್ಕು ಉಲ್ಲಂಘನೆಯಾಗಿದ್ದು ಜಿಲ್ಲಾಡಳಿತ ಈ ವಲಸೆ ಕಾರ್ಮಿಕರಿಗೆ ನಿದ್ರಿಸಲು ಮತ್ತು ವಾಸಿಸಲು ಸೂಕ್ತ ಪರಿಹಾರ ವ್ಯವಸ್ಥೆ ಶೀಘ್ರವಾಗಿ ಕಲ್ಪಿಸಿಕೊಡಬೇಕೆಂದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಡ್ಯಾನಿಯಲ್ ರಾಂಜರ್, ಪ್ರಧಾನ ಕಾರ್ಯದರ್ಶಿ ಪ್ರದೇಶ್ ಪಿ. ಪ್ರಕಟಣೆಯಲ್ಲಿ ಒತ್ತಾಯಿಸಿದರು.





