ಕಥೊಲಿಕ್ ಸಭಾದಿಂದ ಚುನಾವಣಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಉಡುಪಿ: ಸಂಘಟನೆಯ ಅಭಿವೃದ್ಧಿಗೆ ಉತ್ತಮ ಹಾಗೂ ಕ್ರಿಯಾಶೀಲ ಪದಾಧಿಕಾರಿಗಳನ್ನು ಆಯ್ಕೆ ಮಾಡುವಲ್ಲಿ ಪ್ರತಿಯೊಬ್ಬ ಚುನಾವಣಾಧಿಕಾರಿಗಳ ಜವಾಬ್ದಾರಿ ಪ್ರಮುಖವಾಗಿರುತ್ತದೆ ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಹೇಳಿದ್ದಾರೆ.
ಅಂಬಾಗಿಲು ಸಮೀಪದ ಅನುಗ್ರಹ ಪಾಲನಾ ಕೇಂದ್ರದ ಕಥೊಲಿಕ್ ಉಡುಪಿ ಪ್ರದೇಶ ಇದರ 52 ಘಟಕಗಳಿಗೆ 2024ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯ ಪ್ರಯುಕ್ತ ಚುನಾವಣಾಧಿಕಾರಿಗಳ ತರಬೇತಿ ಕಾರ್ಯಾಗಾರಕ್ಕೆ ರವಿವಾರ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಘಟಕಗಳಲ್ಲಿ ಆಯ್ಕೆಯಾದ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಸಂಘಟನೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಸ್ಪಷ್ಟವಾದ ಮಾರ್ಗದರ್ಶನ ನೀಡಬೇಕು ಮತ್ತು ನಿಷ್ಪಕ್ಷಪಾತ ಹಾಗೂ ಪಾರದರ್ಶಕ ರೀತಿಯಲ್ಲಿ ಪದಾಧಿಕಾರಿ ಗಳ ಆಯ್ಕೆಯ ಪ್ರಕ್ರಿಯೆಯನ್ನು ನಡೆಸುವ ಜವಾಬ್ದಾರಿ ಚುನಾವಣಾಧಿಕಾರಿಗಳ ಮೇಲಿದೆ ಎಂದರು.
ಕೇಂದ್ರಿಯ ಚುನಾವಣಾಧಿಕಾರಿ ಹಾಗೂ ನಿಯೋಜಿತ ಅಧ್ಯಕ್ಷ ರೊನಾಲ್ಡ್ ಡಿಆಲ್ಮೇಡಾ ತರಬೇತಿಯನ್ನು ನೀಡಿದರು. 5 ವಲಯಗಳಿಂದ ಸುಮಾರು 60 ಮಂದಿ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ತರಬೇತಿ ಪಡೆದು ಪ್ರಮಾಣ ಪತ್ರ ಪಡೆದವರು ಮುಂದಿನ ದಿನಗಳಲ್ಲಿ ಘಟಕಗಳ ಪದಾಧಿಕಾರಿಗಳ ಚುನಾವಣೆಯನ್ನು ನಡೆಸಲು ಅರ್ಹರಾಗಿರುತ್ತಾರೆ.
ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಪದಾಧಿಕಾರಿಗಳಾದ ಸೊಲೊಮನ್ ಕಾರ್ಕಳ, ನಿಯೋಜಿತ ಅಧ್ಯಕ್ಷರಾದ ರೋನಾಲ್ಡ್ ಆಲ್ಮೇಡಾ, ಮಾಜಿ ಅಧ್ಯಕ್ಷ ಅಲ್ಫೋನ್ಸ್ ಡಿಕೋಸ್ತಾ, ಮೇರಿ ಡಿಸೋಜ, ಆಲ್ವಿನ್ ಕ್ವಾಡ್ರಸ್, ಡಾ. ಜೆರಾಲ್ಡ್ ಪಿಂಟೊ, ವಲೇರಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.







