ಐತಿಹಾಸಿಕ ಸ್ಮಾರಕ ಉಡುಪಿ ಸಬ್‌ಜೈಲ್ ಉಳಿಸಲು ವಿಶಿಷ್ಟ ಪ್ರಯತ್ನ; ಹಳೆಯ ಕಾರಾಗೃಹ ಕಟ್ಟಡ ವಾಸ್ತುಶಿಲ್ಪದ ದಾಖಲಾತಿಯ ಪ್ರದರ್ಶನ

ಉಡುಪಿ, ಡಿ.10: ಉಡುಪಿಯ ಹೃದಯ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕ ಉಡುಪಿಯ ಹಳೆ ಸಬ್‌ಜೈಲ್ ಕಟ್ಟಡವನ್ನು ಉಳಿಸುವ ನಿಟ್ಟಿನಲ್ಲಿ ಇಂಡಿಯನ್ ನೇಶನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆ (ಇಂಟ್ಯಾಕ್)ಯ ಮಂಗಳೂರು ವಿಭಾಗ ಹಾಗೂ ಉಡುಪಿ ಮತ್ತು ಮಣಿಪಾಲ ಉಪವಿಭಾಗ ವಿಶೇಷ ಪ್ರಯತ್ನ ನಡೆಸುತ್ತಿದೆ.
ಉಡುಪಿಯ ಚಿತ್ರಕಲಾ ಮಂದಿರ ಕಲಾ ಶಾಲೆಯ ಜಂಗಮ ಮಠದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಈ ಕುರಿತ ವಿವರ ವಾದ ವಾಸ್ತುಶಿಲ್ಪದ ದಾಖಲಾತಿಯ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಛಾಯಾಗ್ರಾಹಕ ಮುರಳಿ ಅಬ್ಬೆಮನೆ ತೆಗೆದ ಜೈಲಿನ ಛಾಯಾಚಿತ್ರಗಳು, ವಾಸ್ತುಶಿಲ್ಪಿಗಳು ರಚಿಸಿದ ಜೈಲಿನ ವಾಸ್ತುಶಿಲ್ಪದ ವಿನ್ಯಾಸ, ಇತಿಹಾಸ, ಮರದ ಕೆತ್ತನೆ, ಜೈಲಿನ ದಾಖಲೆಗಳನ್ನು ಪ್ರದರ್ಶಿಸ ಲಾಗುತ್ತಿದೆ. ಈ ಮೂಲಕ ಪಾರಂಪರಿಕ ಕಟ್ಟಡದ ಕುರಿತು ಜನರಿಗೆ ಮಾಹಿತಿ ಹಾಗೂ ಕಟ್ಟಡವನ್ನು ಉಳಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ.
ಬ್ರಿಟಿಷ್ ಆಡಳಿತ ಕಾಲದಲ್ಲಿಯೇ ನಿರ್ಮಾಣಗೊಂಡ ಭಾರತದ ಮೂರು ಪ್ರಮುಖ ಜೈಲುಗಳಾದ ಅಂಡಮಾನ್ ಸೆಲ್ಯು ಲಾರ್ ಜೈಲ್, ಕೊಲ್ಕತ್ತಾದ ಅಲಿಫೋರ್‌ಜೈಲ್ ಹಾಗೂ ಬೆಂಗಳೂರಿನ ಜೈಲುಗಳನ್ನು ಯಾವ ರೀತಿಯಲ್ಲಿ ಸಂರಕ್ಷಣೆಯನ್ನು ಮಾಡಿ ಮರು ಬಳಕೆ ಮಾಡಲಾಗುತ್ತಿದೆ ಎಂಬುದರ ಸಂಪೂರ್ಣ ಚಿತ್ರಣವನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಅದೇ ಮಾದರಿಯಲ್ಲಿ ಉಡುಪಿ ಸಬ್‌ಜೈಲಿನ ಕಟ್ಟಡದ ಮರುಬಳಕೆ ಮಾಡಬೇಕೆಂಬುದು ಈ ತಂಡದ ಒತ್ತಾಯವಾಗಿದೆ.
ನಾವು ಮೊದಲ ಹಂತದಲ್ಲಿ ಈ ಕಟ್ಟಡವನ್ನು ಗುರುತಿಸಿ, ಅದರ ಇತಿಹಾಸ, ವಿನ್ಯಾಸಗಳ ಬಗ್ಗೆ ದಾಖಲೀಕರಣ ಮಾಡಿದೇವು. ಈ ಕಟ್ಟಡದ ಬಗ್ಗೆ ಮೊದಲು ನಾವು ತಿಳಿದುಕೊಂಡು ನಂತರ ಬೇರೆಯವರಿಗೆ ತಿಳಿಸುವ ಪ್ರಯತ್ನ ನಮ್ಮದಾ ಗಿದೆ. ಇದೀಗ ಎರಡನೇ ಹೆಜ್ಜೆಯನ್ನು ಇಟ್ಟು ಅದರ ಬಗೆಗಿನ ದಾಖಲಾತಿಗಳ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ. ಈ ಪಾರಂಪರಿಕ ಕಟ್ಟಡವನ್ನು ಯಾವ ರೀತಿ ಬಳಕೆ ಮಾಡಬಹುದು ಎಂಬುದರ ಬಗ್ಗೆ ನಾವೆಲ್ಲ ಚಿಂತನೆ ಮಾಡ ಬೇಕಾಗಿದೆ ಎನ್ನುತ್ತಾರೆ ಇಂಟ್ಯಾಕ್ ಮಂಗಳೂರು ವಿಭಾಗದ ಸಂಚಾಲಕ, ಆರ್ಕಿಟೆಕ್ಟ್ ಸುಭಾಷ್‌ಚಂದ್ರ ಬಸು.
1906ರಲ್ಲಿ ನಿರ್ಮಿಸಲಾದ ಈ ಕಟ್ಟಡವನ್ನು ಕೆಡವಿ ಉಡುಪಿ ನಗರಸಭೆ ಕಚೇರಿಯನ್ನು ನಿರ್ಮಿಸುವ ಉದ್ದೇಶ ಕೂಡ ಇದೆ. ಈ ಹಳೆಯ ಕಟ್ಟಡ ಒಳಗಡೆಯಿಂದ ಬಲಿಷ್ಠವಾಗಿದೆ. ಈ ಹಳೆ ಕಟ್ಟಡದಲ್ಲಿ ಸುಂದರವಾದ ಮರದ ಕೆತ್ತನೆ ಇದೆ. ಇಲ್ಲಿ ಸ್ಟೀಲ್ ಬದಲು ಮರವನ್ನು ಬಳಸಲಾಗಿದೆ. ಅದು ಕೂಡ ಗುಣಮಟ್ಟದ ಮರ ಇಲ್ಲಿದೆ. ಹೊಸ ರೀತಿಯ ಯೋಚನೆ ಮಾಡಿದರೆ ಈ ಕಟ್ಟಡವನ್ನು ಬಳಸಿಕೊಳ್ಳಬಹುದು. ಇದರಲ್ಲಿ ಮ್ಯೂಸಿಯಂ, ಜೈಲುವಾಸಿಗಳ ಕ್ರಾಫ್ಟ್ ಮಾರಾಟ ಕೇಂದ್ರವನ್ನಾಗಿ ಬಳಸಿಕೊ ಳ್ಳಬಹುದಾಗಿದೆ. ಅಲ್ಲದೆ ಜೈಲಿನ ಪರಿಕಲ್ಪನೆ ಬಗ್ಗೆ ವಿದ್ಯಾರ್ಥಿಗಳಿಗೆ ತೋರಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಈಗಾಗಲೇ ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅವರು ಇದನ್ನು ಪಾರಂಪರಿಕ ಕಟ್ಟಡ ಕಮಿಟಿ ಮುಂದೆ ಇಟ್ಟಿದ್ದಾರೆ. 100ವರ್ಷ ಹಳೆ ಕಟ್ಟಡವನ್ನು ಕೆಡವು ಮೊದಲು ಈ ಕಮಿಟಿ ಹಾಗೂ ಪುರಾತತ್ವ ಇಲಾಖೆ ಯಿಂದ ವರದಿ ಪಡೆದುಕೊಳ್ಳಬೇಕಾಗುತ್ತದೆ. ಪುರಾತತ್ವ ಇಲಾಖೆಯವರು ಕೂಡ ನಮಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರಕಾರ ಪ್ರತಿ ಜಿಲ್ಲೆಯಲ್ಲೂ ಇಂಜಿನಿಯರ್, ವಾಸ್ತುಶಿಲ್ಪಿ, ಸಾಮಾಜಿಕ ಕಾರ್ಯಕರ್ತರು ಸಹಿತ 10-12 ಮಂದಿಯ ಹೇರಿಟೇಜ್ ಕಮಿಟಿ ರಚಿಸಬೇಕಾಗಿದೆ.
-ಸುಭಾಷ್‌ಚಂದ್ರ ಬಸು, ವಾಸ್ತುಶಿಲ್ಪಿ
"ಸಬ್‌ಜೈಲು ಕಟ್ಟಡ ಉಳಿಸುವ ನಿಟ್ಟಿನಲ್ಲಿ ಇಂಟ್ಯಾಕ್‌ನವರು ಸಲಹೆ ಸೂಚನೆ ಗಳನ್ನು ಕೊಟ್ಟಿದ್ದಾರೆ. ಅದರಂತೆ ನಾವು ಕಟ್ಟಡ ನಿರ್ಮಿಸಲು ಬದ್ಧರಾಗಿದ್ದೇವೆ. ಈಗಾಗಲೇ ಜಾಗ ನಗರಸಭೆಗೆ ಹಸ್ತಾಂತರವಾಗಿದೆ. ಈ ಕಟ್ಟಡ 100ವರ್ಷ ಹಳೆಯದಾಗಿರುವುದರಿಂದ ಕಟ್ಟಡ ಕೆಡವಲು ಪಾರಂಪರಿಕ ಕಟ್ಟಡ ಕಮಿಟಿಯಲ್ಲಿ ತೀರ್ಮಾನ ಆಗಬೇಕಾಗಿದೆ"
-ರಾಯಪ್ಪ, ಪೌರಾಯುಕ್ತರು, ನಗರಸಭೆ, ಉಡುಪಿ







