ವಾದಿರಾಜ ಕನಕದಾಸ ಸಂಗೀತೋತ್ಸವ: ವಿಜೇತರಿಗೆ ಬಹುಮಾನ ವಿತರಣೆ

ಉಡುಪಿ, ಡಿ.10: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಎಂಜಿಎಂ ಕಾಲೇಜು, ಸರಿಗಮಪ ಭಾರತಿ ಸಂಗೀತ ವಿದ್ಯಾಲಯ ಆಶ್ರಯದಲ್ಲಿ 45ನೇ ವಾದಿರಾಜ ಕನಕದಾಸ ಸಂಗೀತೋತ್ಸವ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿಗ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಶುಭಾ ಮರವಂತೆ ಮಾತನಾಡಿ, ಸಂಗೀತ, ಸಾಹಿತ್ಯಕ್ಕೆ ಹತ್ತಿರದ ಸಂಬಂಧವಿದೆ. ಈ ಅಭಿರುಚಿ ಇರುವನು ಸಹೃದಯಿ ಆಗಿರುತ್ತಾನೆ. ದಾಸ ಸಾಹಿತ್ಯ ಪರಂಪರೆ ಸಮಗ್ರತೆಯನ್ನು ಒಳಗೊಂಡಿದೆ. ಯಕ್ಷಗಾನ, ಸಾಹಿತ್ಯ, ಸಂಗೀತ ದೊಡ್ಡ ನಂಟಿದೆ. ಕನಕಾದಸರ ಕಾಲದಲ್ಲಿ ಸಂಗೀತವು ನೃತ್ಯವನ್ನು ಒಳಗೊಂಡ ಕಲಾ ಪ್ರಕಾರವಾಗಿತ್ತು. ಸಂಗೀತ ಶಾಸ್ತ್ರಕ್ಕೆ ವಿಶೇಷ ಆಧ್ಯತೆಯನ್ನು ಕನಕದಾಸರು ನೀಡಿದರು. ಕನಕದಾಸರ ಕೀರ್ತನೆಗಳು ವಿದ್ಯಾರ್ಥಿಗಳ ಮೂಲಕ ಸಮಾಜಕ್ಕೆ ತಲುಪಬೇಕು ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ್, ಪದವಿ ಪೂರ್ವ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. ತೀಕ್ಷಣ್ ಶೆಟ್ಟಿ ಕನಕದಾಸರ ಕೀರ್ತನೆ ಹಾಡಿದರು. ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸರಿಗಮ ಭಾರತಿ ಸಂಗೀತ ವಿದ್ಯಾಲಯದ ಮುಖ್ಯಸ್ಥೆ ಉಮಾ ಉದಯ ಶಂಕರ್ ನಿರೂಪಿಸಿದರು.
ಸಮಾರೋಪ: ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಮಾತನಾಡಿ, ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಸಂಗೀತ ಕಲೆಯ ಅಭಿರುಚಿಯನ್ನು ಮೂಡಿಸಬೇಕು. ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಮಕ್ಕಳನ್ನು ಜತೆಗೆ ಕರೆತಂದು ವಾದಿರಾಜ, ಕನಕದಾಸರ ಸಂಗೀತದ ಮಹತ್ವ ಅರಿಯುವಂತೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸರಿಗಮ ಭಾರತಿ ಸಂಗೀತ ವಿದ್ಯಾಲಯದ ಮುಖ್ಯಸ್ಥೆ ಉಮಾ ಉದಯ ಶಂಕರ್ ಉಪಸ್ಥಿತರಿದ್ದರು. ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಸಂಸ್ಕೃತ ಉಪನ್ಯಾಸಕಿ ಡಾ. ವಿಜಯಲಕ್ಷ್ಮೀ ನಿರೂಪಿಸಿದರು.
ಗಾಯನ ಸ್ಪರ್ಧೆ ವಿಜೇತರು
ಎಲ್‌ಕೆಜಿಯಿಂದ 4ನೇ ತರಗತಿ: ಪ್ರ-ಬ್ರಹ್ಮಾವರ ಲಿಟ್ಲ್‌ರಾಕ್ ಸ್ಕೂಲ್ ಧೃತಿ ಎಸ್.ಭಟ್, ದ್ವಿ-ಟ್ರಿನಿಟಿ ಸ್ಕೂಲ್‌ನ ಶ್ರಿಪಾಲ್ ಭಟ್, ತೃ- ಮಧವಕೃಪ ಶಾಲೆಯ ಸರಯು ನಾಯ್ಕ್. 5ರಿಂದ 7ನೇ ತರಗತಿ: ಪ್ರ-ವಿದ್ಯೋದಯ ಶಾಲೆಯ ಪರ್ಜನ್ಯ ಕೆ.ರಾವ್, ದ್ವಿ-ಆನಂದತೀರ್ಥ ಶಾಲೆಯ ಪ್ರಣವ ಅಡಿಗ, ತೃ- ಇಂದ್ರಾಳಿ ಶಾಲೆಯ ಐಶಾನಿ ಶೆಟ್ಟಿ.
8ರಿಂದ ಪಿಯುಸಿ: ಪ್ರ-ಶ್ರೀ ಲಕ್ಷ್ಮೀ ಜನಾರ್ದನ ಸ್ಕೂಲ್‌ನ ಶರಣ್ಯ ತಂತ್ರಿ, ದ್ವಿ- ಶ್ರೀವತ್ಸ, ತೃ-ಮಾಧವಕೃಪ ಶಾಲೆಯ ಮೇದಿನಿ ಭಟ್, ಲಿಟ್ಲ್‌ರಾಕ್ ಸ್ಕೂಲ್‌ನ ಪ್ರಣತಿ ಎಸ್.ಭಟ್. ಪದವಿ, ಸ್ನಾತಕೋತ್ತರ, ಸಾರ್ವಜನಿಕ: ಪ್ರ- ಬಂಟಕಲ್ ಎಂಜಿನಿಯರಿಂಗ್ ಕಾಲೇಜಿನ ಚಿತ್ಕಲಾ,ದ್ವಿ- ಸಿಎ ವಿದ್ಯಾರ್ಥಿ ಸುಮೇಧ ತಂತ್ರಿ, ತೃ- ನೇತ್ರಜ್ಯೋತಿ ವಿದ್ಯಾಸಂಸ್ಥೆಯ ಸೌಜನ್ಯ ಪೆರ್ಡೂರು.







