ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹ

ಕುಂದಾಪುರ, ಡಿ.11: ಕಟ್ಟಡ ಕಾರ್ಮಿಕರ ಹಲವು ವೈದ್ಯಕೀಯ ವೆಚ್ಚಗಳ ಅರ್ಜಿಗಳನ್ನು ತಿರಸ್ಕರಿಸುವ ಮಂಡಳಿಯು ಉಚಿತ ವೈದ್ಯಕೀಯ ತಪಾಸಣೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ 600 ಕೋಟಿ ರೂ. ಹಣ ನೀಡುತ್ತಿದೆ. ಈ ರೀತಿ ಬೆದರಿಕೆ ಆಮಿಷಗಳನ್ನು ಒಡ್ಡುತ್ತಿರುವ ಮಂಡಳಿ ಕ್ರಮ ಖಂಡನೀಯ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಟೀಕಿಸಿದ್ದಾರೆ.
ಕುಂದಾಪುರ ಹೆಂಚು ಕಾರ್ಮಿಕರ ಭವನದಲ್ಲಿ ರವಿವಾರ ನಡೆದ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು)ದ 17ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ವೈದ್ಯಕೀಯ ತಪಾಸಣೆ ನಡೆಸಬೇಕೆಂದು ಕಾರ್ಮಿಕ ಸಂಘಟನೆಗಳಾಗಲಿ ಕಾರ್ಮಿಕರಾಗಲಿ ಮನವಿಯಾಗಲಿ ಆಗ್ರಹಗಳನ್ನು ಎಂದೂ ಮಾಡಿಲ್ಲ. ಕಟ್ಟಡ ಕಾರ್ಮಿಕ ಸಂಘಟನೆಗಳು ಹಲವು ಹೋರಾಟಗಳಲ್ಲಿ ವೈದ್ಯಕೀಯ ವೆಚ್ಚ ಹೆಚ್ಚಳ ಮಾಡಬೇಕೆಂದು ಹಲವು ಬಾರಿ ಮನವಿ ಕೊಡಲಾಗಿದೆ. ಆದರೆ ಕಾರ್ಮಿಕ ಇಲಾಖೆ ಹಾಗೂ ಕಾರ್ಮಿಕ ಮಂತ್ರಿ ಕಾರ್ಮಿಕ ಬೇಡಿಕೆಗಳನ್ನು ತಿರಸ್ಕರಿಸಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ, ಪಿಂಚಣಿಗಾಗಿ ಇರುವ ಹಣವನ್ನು ಕಡಿತ ಮಾಡುತ್ತಿದ್ದು ಸೌಲಭ್ಯ ಅರ್ಜಿಗಳು ಮಂಜೂರು ಮಾಡಲು ಹಲವಾರು ಸಮಸ್ಯೆಗಳನ್ನು ತರುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ ಗೊಲ್ಲ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಪಕ್ಷಗಳೆರಡೂ ಕಾರ್ಮಿಕರ ಕಲ್ಯಾಣ ನಿಧಿಗಳನ್ನು ಕಾರ್ಮಿಕರ ಅವಶ್ಯಕತೆಗಳಿಗಾಗಿ ಬಳಸಬೇಕು. ಆದರೆ ಮಂಡಳಿ ಕಾರ್ಮಿಕರ ಹಣವನ್ನು ಖರೀದಿಗಳಿಗೆ ಬಳಸುತ್ತಿರುವುದು ವಿರೋಧಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ, ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ. ಮಾತನಾಡಿದರು. ಮುಂದಿನ ಅವಧಿಗೆ ನೂತನ ಸಮಿತಿ ಆಯ್ಕೆ ಮಾಡಲಾಯಿತು. ಅಧ್ಯಕ್ಷತೆ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ ವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ಜಗದೀಶ್ ಆಚಾರ್ ಲೆಕ್ಕ ಪತ್ರ ಮಂಡಿಸಿದರು. ಮಹಾಸಭೆಯಲ್ಲಿ ವೈದ್ಯಕೀಯ ತಪಾಸಣೆ ಬಹಿಷ್ಕಾರ ಹಾಗೂ ಮರಳು ಸಮಸ್ಯೆ ಬಗೆಹರಿಸಲು ನಿರ್ಣಯಿಸಲಾಯಿತು. ಶೃದ್ಧಾಂಜಲಿ ನಿರ್ಣಯವನ್ನು ಸಂಘದ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಶಶಿಕಾಂತ್ ಸ್ವಾಗತಿಸಿದರು. ವಿಜೇಂದ್ರ ಅತಿಥಿಗಳನ್ನು ಗೌರವಿಸಿದರು.







