ನಿಟ್ಟೂರು ಮಹಿಳಾ ನಿಲಯದಲ್ಲಿ ಅವಳಿ ವಿವಾಹದ ಸಂಭ್ರಮ

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಪರ್ದಿಯಡಿ ಬರುವ ನಿಟ್ಟೂರಿನ ಸರಕಾರಿ ರಾಜ್ಯ ಮಹಿಳಾ ನಿಲಯ ಇದೀಗ ಅವಳಿ ವಿವಾಹ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಇದೇ ಡಿ.20ರಂದು ಇಲ್ಲಿ ಅಪರೂಪಕ್ಕೆಂಬಂತೆ ನಿಲಯದ ಇಬ್ಬರು ನಿವಾಸಿನಿಯರಿಗೆ ವಿವಾಹದ ಭಾಗ್ಯ ಕೂಡಿ ಬಂದಿದೆ.
ರಾಜ್ಯ ಮಹಿಳಾ ನಿಲಯ ಅನಾಥ ಹೆಣ್ಣು ಮಕ್ಕಳ, ಬೇರೆ ಬೇರೆ ಕಾರಣದಿಂದ ಮನೆಯಿಂದ, ಮನೆಯವರಿಂದ ದೂರವಾ ಗುವ ಹೆಣ್ಣು ಮಕ್ಕಳ ಆಶ್ರಯತಾಣ. ಇದೀಗ ಇಲ್ಲಿ ಆಶ್ರಯ ಪಡೆದಿರುವ ಇಬ್ಬರು ಯುವತಿಯರಿಗೆ ಇದೇ ಡಿ.20ರಂದು ಕಂಕಣ ಭಾಗ್ಯ ಒಲಿದಿದೆ.
ಸ್ಟೇಟ್‌ಹೋಮ್‌ನ ನಿವಾಸಿನಿ ಶೀಲಾ ಎಂಬವರು ಕುಂದಾಪುರ ತಾಲೂಕು ಮೊಳಹಳ್ಳಿಯ ಗಣೇಶ ಶಾಸ್ತ್ರಿ ಎಂಬವರನ್ನು ವರಿಸಿದರೆ, ಕುಮಾರಿ ಎಂಬವರು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ನಂದೊಳ್ಳಿಯ ಸತ್ಯನಾರಾಯಣ ಭಟ್ಟ ಎಂಬವರ ಕೈ ಹಿಡಿಯಲಿದ್ದಾರೆ.
ಜಿಲ್ಲಾಡಳಿತದ ನಿರ್ದೇಶನದಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ವಿವಾಹವನ್ನು ನಡೆಸಿಕೊಡಲಿದೆ. ಡಿ.20ರ ಬುಧವಾರ ಬೆಳಗ್ಗೆ 11:40ರ ಶುಭಮುಹೂರ್ತಕ್ಕೆ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಎರಡು ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಲಿವೆ.
ತಮಗೆ ಬಂದ ಮದುವೆ ಪ್ರಸ್ತಾಪದ ಹಿನ್ನೆಲೆಯಲ್ಲಿ ಮಹಿಳಾ ಇಲಾಖೆಯ ಅಧಿಕಾರಿಗಳು ಯುವಕರ ಮನೆಯವರ ಪೂರ್ವಾ ಪರಗಳನ್ನು ಪರಿಶೀಲಿಸಿ, ಅವರ ಮನೆಯವರೊಂದಿಗೆ ಚರ್ಚಿಸಿ ನೀಡಿದ ವರದಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಮತ್ತೊಮ್ಮೆ ಪರಿಶೀಲಿಸಿ ಅನುಮೋದನೆ ನೀಡಿದೆ. ಬಳಿಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಿಂದ ವಿವಾಹಕ್ಕೆ ಹಸಿರು ನಿಶಾನೆ ದೊರಕಿದೆ.







