ಉಡುಪಿ: ಪೂರ್ಣಪ್ರಜ್ಞದಲ್ಲಿ ಜೆಮಿನಿಡ್ ಉಲ್ಕಾವೃಷ್ಟಿ ವೀಕ್ಷಣೆ

ಉಡುಪಿ, ಡಿ.15: ಪ್ರತಿ ವರ್ಷ ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಅತ್ಯಂತ ಸ್ಪಷ್ಟವಾಗಿ ಬರಿಗಣ್ಣಿಗೆ ಗೋಚರಿಸುವ ಜೆಮಿನಿಡ್ ಉಲ್ಕಾ ವೃಷ್ಟಿ ಗುರುವಾರ ರಾತ್ರಿ ಆಕಾಶದಲ್ಲಿ ಕಂಡುಬಂದಿದ್ದು, ನೂರಾರು ಮಂದಿ ಆಸಕ್ತರು ಇದನ್ನು ವೀಕ್ಷಿಸಿ ಸಂಭ್ರಮಪಟ್ಟರು. ರಾತ್ರಿ ಆಕಾಶದಲ್ಲಿ ನೂರಾರು ಉಲ್ಕೆಗಳು, ಎಲ್ಲಾ ದಿಕ್ಕಿನಲ್ಲಿ ನಾನಾ ಬಣ್ಣಗಳನ್ನು ಹೊಂದಿಕೊಂಡು ಮಿನುಗುವಂತೆ ಗೋಚರಿಸಿದವು.
ನಗರದ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಡಿ.14ರ ರಾತ್ರಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಖಗೋಳ ವೀಕ್ಷಕರು ಹಾಗೂ ಆಸಕ್ತರಿ ಗಾಗಿ ಜೆಮಿನಿಡ್ ಉಲ್ಕಾವೃಷ್ಟಿ ವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಆಕಾಶದಲ್ಲಿ ಉಲ್ಕೆಗಳು ಗೋಚರಿಸುವ ಮುನ್ನ ಸಂಜೆ 7:30ರಿಂದ ಆಕಾಶ ವೀಕ್ಷಣೆಯನ್ನು ಪ್ರಾರಂಭಿಸಲಾಗಿತ್ತು. ದೂರ ದರ್ಶಕಗಳ ಮೂಲಕ ಗುರುಗ್ರಹ, ಶನಿ ಗ್ರಹ ಹಾಗೂ ಮಹಾವ್ಯಾಧದ ಜ್ಯೋತಿರ್ಮೇಘ (ಒರಾಯನ್ ನೆಬ್ಯುಲಾ)ಗಳನ್ನು ವೀಕ್ಷಿಸಲಾಯಿತು. ಕಾಲೇಜಿನ 20ಕ್ಕೂ ಅಧಿಕ ಆಸಕ್ತ ವಿದ್ಯಾರ್ಥಿಗಳು ಸೇರಿ 60ಕ್ಕೂ ಅಧಿಕ ಮಂದಿ ಆಕಾಶ ವೀಕ್ಷಣೆ ಮಾಡಿದರು.
ಮಧ್ಯರಾತ್ರಿಯ ಬಳಿಕವಷ್ಟೇ ಉಲ್ಕೆಗಳು ಗೋಚರಿಸತೊಡಗಿದ್ದು, ಬೆಳಗಿನ ಜಾವ 2:30ರ ತನಕವೂ ಉಲ್ಕಾ ವೀಕ್ಷಣೆ ನಡೆಯಿತು. ಇಲ್ಲಿ 70ಕ್ಕೂ ಹೆಚ್ಚು ಉಲ್ಕೆಗಳನ್ನ ಗುಂಪು ವೀಕ್ಷಿಸಿತು.
ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶು ಪಾಲ ಡಾ.ಎ.ಪಿ. ಭಟ್ ಮುಖ್ಯ ಅತಿಥಿಗಳಾಗಿದ್ದರು. ಇವರು ಉಲ್ಕೆಗಳು ಹಾಗೂ ಉಲ್ಕಾಪಾತಗಳ ಮೂಲ ಹಾಗೂ ಅದಕ್ಕೆ ಸಂಬಂಧಿಸಿದ ಖಗೋಳಶಾಸ್ತ್ರವನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮು ಎಲ್. ಉಪಸ್ಥಿತರಿದ್ದರು. ಸಂಘದ ವಿದ್ಯಾರ್ಥಿಗಳಾದ ಭೂಮಿಕಾ ಉಡುಪಾ, ಶರಧಿ ಹಾಗೂ ಭಾರ್ಗವ ಭಟ್ ಇವರು ದೂರದರ್ಶಕಗಳನ್ನು ಹಾಗು ವೀಕ್ಷಣಾ ಕಾರ್ಯಕ್ರಮವನ್ನು ನಿರ್ವಹಿಸಿದರು.







