ಸಲ್ಲಬೇಕಾದ ಹಕ್ಕುಗಳ ಬಗ್ಗೆ ನಾಗರಿಕರಿಗೆ ಅರಿವು ಅಗತ್ಯ: ಸೋಮಶೇಖರ ವಿ.ಕೆ

ಕುಂದಾಪುರ, ಡಿ.15: ಪ್ರಜಾಪ್ರಭುತ್ವದಡಿಯಲ್ಲಿ ಬದುಕುವ ನಾವು ಕೆಳಮಟ್ಟ ದಿಂದ ಪಾರ್ಲಿಮೆಂಟ್ ತನಕ ಪ್ರತಿನಿಧಿ ಗಳನ್ನು ಆರಿಸುವ ಮಹತ್ತರ ಜವಬ್ದಾರಿ ಹೊಂದಿದ್ದೇವೆ. ಮತದಾನ ಮಾಡಿದ ಮೇಲೆ ಜವಬ್ದಾರಿ ಮುಗಿಯಿತು ಅಂದು ಕೊಳ್ಳದೆ ನಮ್ಮ ಕರ್ತವ್ಯವನ್ನು ಅರಿಯಬೇಕು ಎಂದು ಗ್ರಾಹಕ ಶಕ್ತಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಕರ್ನಾಟಕದ ಗ್ರಾಹಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಸ್ಥಾಪಕ ಸೋಮಶೇಖರ ವಿ.ಕೆ ಹೇಳಿದ್ದಾರೆ.
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಹಾಗೂ ಉಡುಪಿ ಗ್ರಾಹಕರ ಹಿತರಕ್ಷಣಾ ವೇದಿಕೆ ಸಹಭಾಗಿತ್ವದಲ್ಲಿ ಕುಂದಾಪುರ ಜ್ಯೂನಿಯರ್ ಕಾಲೇಜು ಅವರಣದಲ್ಲಿರುವ ರೋಟರಿ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಗ್ರಾಹಕ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.
ಹಕ್ಕುಗಳು ಕೆಲವು ಬಾರಿ ಚಳುವಳಿಗಳಾಗುತ್ತದೆ. ಅಂತೆಯೇ ಇಡೀ ಪ್ರಪಂಚದಲ್ಲಿ ಗ್ರಾಹಕ ಚಳುವಳಿಯು ಯಾವುದೇ ಜಾತಿ, ಧರ್ಮ, ಜಾತಿ ಬೇಧವಿಲ್ಲದೆ ಎಲ್ಲರೂ ಒಂದೇ ಕುಟುಂಬ ಎನ್ನುವ ಭಾವನೆಯಿಂದ ಮಾನವತೆ ಯಡಿಯಲ್ಲಿ ಕಾರ್ಯ ಚರಿಸುತ್ತಿದೆ. ಕೊಂಡುಕೊಳ್ಳುವುದು, ಕೊಡುವುದರ ಜೊತೆಗೆ ಸಲ್ಲಬೇಕಾದ ಹಕ್ಕುಗಳ ಬಗ್ಗೆ ನಾಗರಿಕರಿಗೆ ಗಮನವಿರಬೇಕು. ಸಲ್ಲಬೇಕಾದ ಮೂಲಭೂತ ಸೌಕರ್ಯಗಳ ಬಗೆಗಿನ ಹಕ್ಕುಗಳನ್ನು ಎಲ್ಲರೂ ಅರಿಯಬೇಕು ಎಂದರು.
ಗ್ರಾಹಕರ ಹಕ್ಕು ಕಾಯ್ದೆ ಆಕಸ್ಮಿಕವಾಗಿ 1986ರಲ್ಲಿ ಬಂದಿದೆ. ಡಿಸೆಂಬರ್ 24 ರಂದು ಗ್ರಾಹಕರ ದಿನ ಎಂದು ಆಚರಿಸು ತ್ತಿದ್ದು ಇದು ಅಗತ್ಯ ಕಾನೂನಾಗಿದೆ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಜನಕ್ಕೆ ಅದರ ಮೂಲಕವೇ ವಾಪಾಸ್ ಅಭಿವೃದ್ಧಿ ಕಾರ್ಯಗಳಾಗುತ್ತಿದೆ. ಸರಕಾರ ಮಾತ್ರದಿಂದ ಅಭಿವೃದ್ಧಿ ಅಸಾಧ್ಯ. ಆದ್ದರಿಂದ ಸರಕಾರವು ಖಾಸಗಿ ಸಹಭಾಗಿತ್ವದಲ್ಲಿ ನಿಯಂತ್ರಣ ಅಧಿಕಾರದ ಪ್ರಾಧಿಕಾರಗಳನ್ನು ಮಾಡಿದೆ. ಜನರು ಮೊಬೈಲ್ ಬಳಕೆಯ ಸಾಧಕ-ಬಾಧಕ ತಿಳಿದುಕೊಳ್ಳುವ ಜೊತೆಗೆ ಆನ್‌ಲೈನ್‌ನಲ್ಲಿ ಮೋಸ ಹೋಗುವುದರಿಂದ ಎಚ್ಚೆತ್ತು ಕೊಳ್ಳಬೇಕು. ಇದೊಂದು ಸಾರ್ವಜನಿಕ ಹಿತಾಸಕ್ತಿ ಆಂದೋಲನವಾಗಬೇಕು ಎಂದು ಅವರು ತಿಳಿಸಿದರು.
ಕುಂದಾಪುರ ಠಾಣಾ ಪೊಲೀಸ್ ಉಪನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ, ಸರಕಾರಿ ಜ್ಯೂನಿಯರ್ ಕಾಲೇಜು ಉಪಪ್ರಾಂಶುಪಾಲ ಕಿರಣ್ ಹೆಗ್ಡೆ ಕೆ., ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಉಡುಪಿ ಗ್ರಾಹಕರ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಗ್ರಾಹಕರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಜಿ.ಬಿ.ಮೋಹನ್ ಕಾರ್ಯಕ್ರಮ ನಿರೂಪಿಸಿದರು.







