ಪಿ.ಪಿ.ಸಿ ಕಾಲೇಜಿನಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮ

ಉಡುಪಿ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕನ್ನಡ ವಿಭಾಗಗಳ ಸಹಯೋಗದೊಂದಿಗೆ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಓದು ಕಾರ್ಯಕ್ರಮ ಪೂರ್ಣಪ್ರಜ್ಞ ಪದವಿ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ನಡೆಯಿತು.
ಕಾಲೇಜಿನ ಗ್ರಂಥಪಾಲಕ ಅನಿಲ್ ಕುಮಾರ್ ಜೆ. ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿ, ಶಿಕ್ಷಣ, ಆರೋಗ್ಯ, ವೃತ್ತಿ ಹೀಗೆ ಹಲವು ಸಂಗತಿಗಳಿಗೆ ಅನ್ವಯವಾಗುವಂತೆ ಅಚ್ಚುಕಟ್ಟಾದ ನಿಯಮಗಳನ್ನು ಜಾರಿಗೆ ತರುವ ಮೂಲಕ ಸಮಾನತೆಯ, ಸ್ವಸ್ಥ ಸಮಾಜವನ್ನು ನಿರ್ಮಿಸುವುದಕ್ಕಾಗಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಸುಕನ್ಯ ಮೇರಿ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನದ ಕಾನೂನು ವ್ಯಾಪ್ತಿಯಲ್ಲಿ ನಾವೆಲ್ಲ ಒಳಗೊಂಡಿದ್ದೇವೆ. ಅವರು ಬರೆದಿರುವ ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೆ ಪವಿತ್ರ ಗ್ರಂಥವಾಗಿದ್ದು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನನ್ನು ಹೇಗೆ ತರಬೇಕೆಂದು ಅಂಬೇಡ್ಕರ್ ತಿಳಿಸಿದ್ದಾರೆ ಎಂದರು.
ಕಾರ್ಯಕ್ರಮ ಪ್ರಯುಕ್ತ ಏರ್ಪಡಿಸಲಾದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹು ಮಾನಗಳನ್ನು ವಿತರಿಸಲಾ ಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಚಿರಂಜನ್ ಕೆ ಶೇರಿಗಾರ್ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಪ್ನ ನಿರೂಪಿಸಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಪ್ರಜ್ಞಾ ಮಾರ್ಪಳ್ಳಿ ವಂದಿಸಿದರು.







