ಶಾಲಾ ಮಟ್ಟದಲ್ಲಿಯೇ ಜೀವನಕ್ರಮ ಕಲಿಸುವುದು ಮುಖ್ಯ: ಡಾ.ಹೆಬ್ಬಾರ್

ಕುಂದಾಪುರ, ಡಿ.17: ಅಂಕ ಆಧಾರಿತ ಶಿಕ್ಷಣ ವ್ಯವಸ್ಥೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಶಾಲಾ ಮಟ್ಟದಲ್ಲಿಯೇ ಜೀವನಕ್ರಮವನ್ನು ಕಲಿಸಬೇಕು. ಶಿಸ್ತು, ಸಂವಹನ, ವಿಧೇಯತೆಯ ಪಾಠವನ್ನು ಕಲಿಸಬೇಕೆಂದು ಕುಂದಾಪುರದ ಮಕ್ಕಳ ತಜ್ಞ ಡಾ.ಎಚ್.ಆರ್.ಹೆಬ್ಬಾರ್ ಹೇಳಿದ್ದಾರೆ.
ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶನಿವಾರ ನಡೆದ ಕೊಡ್ಲಾಡಿ-ಬಾಂಡ್ಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ’ಕಾಮನಬಿಲ್ಲು’ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ವಿದ್ಯೆ ಎನ್ನುವುದು ವಿಸ್ತಾರವಾದ ಚಟುವಟಿಕೆ. ಮಕ್ಕಳಲ್ಲಿ ಪರಿಪೂರ್ಣತೆಯ ಬದುಕಿನ ಮಾರ್ಗದರ್ಶನ ನೀಡಿದಾಗ ಅವರು ಸತ್ಪ್ರಜೆಗಳಾಗುತ್ತಾರೆ. ಮಕ್ಕಳನ್ನು ಊರು, ಪ್ರದೇಶ, ಕುಟುಂಬಕ್ಕೆ ಸೀಮಿತವಾಗಿ ಬೆಳಸದೆ ಜಾಗತಿಕವಾಗಿ ಆಲೋಚಿಸುವ ಪರಿಸರ ಸೃಷ್ಟಿ ಮಾಡಬೇಕು. ಸೋಲು ಗೆಲುವಿನ ಸೋಪಾನ ಎಂಬ ಮನಸ್ಥಿತಿ ಮೂಡಿಸಿ ಆತ್ಮಸ್ಥೈರ್ಯ ಹೆಚ್ಚಿಸಬೇಕು ಎಂದರು.
ವಕ್ವಾಡಿ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯ ನಿರ್ವಾಹಕಿ ಅನುಪಮಾ ಎಸ್.ಶೆಟ್ಟಿ ಮಾತನಾಡಿ ದರು. ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೈಂದೂರು ಅಧ್ಯಕ್ಷ ಶೇಖರ್ ಪೂಜಾರಿ, ಆಜ್ರಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಬೈಂದೂರು ಕ್ಷೇತ್ರ ದೈಹಿಕ ಶಿಕ್ಷಣಾ ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಮಡಿವಾಳ, ಎಸ್‌ಡಿಎಂಸಿ ಅಧ್ಯಕ್ಷ ರತ್ನಾಕರ ಆಚಾರ್ಯ ಉಪಸ್ಥಿತರಿದ್ದರು.
ಬಾಂಡ್ಯ ಸ.ಹಿ.ಪ್ರಾ ಶಾಲೆ ಮುಖ್ಯೋಪಾಧ್ಯಾಯ ಸಂತೋಷ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯ ಕನ್ನಡ ಶಿಕ್ಷಕಿ ವಿಶಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹಶಿಕ್ಷಕರಾದ ಸ್ಮಿತಾ ಬಹುಮಾನ ಪಟ್ಟಿ ವಾಚಿಸಿ, ಸುಕುಮಾರ ಶೆಟ್ಟಿ ವಂದಿಸಿದರು.







