ಕೋವಿಡ್ ತಪಾಸಣೆ ಮತ್ತೆ ತೀವ್ರಗೊಳಿಸಲು ಸಜ್ಜು: ಡಾ.ವಾಸುದೇವ್

ಉಡುಪಿ: ಕೇರಳದಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲೂ ಕೋವಿಡ್ ತಪಾಸಣೆ ಯನ್ನು ಹೆಚ್ಚಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಜಿಲ್ಲೆಯೂ ಇದಕ್ಕೆ ಸಜ್ಜಾಗಿದೆ. ಜಿಲ್ಲೆಯಲ್ಲಿ ಜ್ವರದೊಂದಿಗೆ ನೆಗಡಿ, ಕೆಮ್ಮು ರೋಗ ಲಕ್ಷಣವಿರುವ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ್ ಉಪಾಧ್ಯಾಯ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಉಡುಪಿ ತಾಪಂನ 3ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡುತಿದ್ದರು. ಉಡುಪಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ರವೀಂದ್ರ (ಭೂ ಕಂದಾಯ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ) ಸಭೆಯ ಅಧ್ಯಕ್ಷತೆ ವಹಿಸಿದ್ದರು.
60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಬೇಕು. ಜ್ವರ, ಶೀತ, ಕೆಮ್ಮು ಲಕ್ಷಣವಿದ್ದರೆ ತಕ್ಷಣ ಪರೀಕ್ಷೆ ಮಾಡಿಕೊಳ್ಳಬೇಕು.ರಾಜ್ಯದಲ್ಲಿ ಪ್ರತಿ ದಿನವೂ 5000 ಮಂದಿಯನ್ನು ಪರೀಕ್ಷೆಗೆ ಒಳಪಡಿಸುವ ಸೂಚನೆ ಬಂದಿದ್ದು, ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ರಾಜ್ಯ ಆರೋಗ್ಯ ಸಚಿವರು ಸೂಕ್ತ ಮಾರ್ಗಸೂಚಿಗಳನ್ನು ನೀಡಲಿದ್ದಾರೆ. ರಾಜ್ಯದ ಸರಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಡಾ.ವಾಸುದೇವ್ ತಿಳಿಸಿದರು.
ಪರೀಕ್ಷೆಯ ವೇಳೆ ಸೋಂಕು ಪತ್ತೆಯಾದರೆ (ಪಾಸಿಟಿವ್) ಅಂಥವರು ಐಸೋಲೇಷನ್‌ನಲ್ಲಿ (ಪ್ರತ್ಯೇಕವಾಗಿ) ಇರಬೇಕು ಎಂದು ಸೂಚಿಸಿದ ಡಾ. ವಾಸುದೇವ್, ನಮ್ಮಲ್ಲಿ ಜ್ವರ ಹಾಗೂ ಶೀತದ ಲಕ್ಷಣವಿರುವ ಹೆಚ್ಚಿನವರು ಪರೀಕ್ಷೆ ಮಾಡಿಸಿ ಕೊಳ್ಳಲು ಮುಂದಾಗುತ್ತಿಲ್ಲ ಎಂದರು.
ಜಿಲ್ಲೆಯಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಸೂಕ್ತ ವ್ಯವಸ್ಥೆಗಳಿದ್ದು, ಯಾವುದೇ ಹಿಂಜರಿಕೆ ಇಲ್ಲದೇ ಆದ್ಯತೆ ಮೇಲೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದವರು ಮನವಿ ಮಾಡಿದರು.
ನೋಂದಣಿ ಕಡ್ಡಾಯ: ಉಡುಪಿ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರಕ್ಕೆ 1.93 ಲಕ್ಷ ರೂ.ಪ್ರೀಮಿಯಂ ಸಂಗ್ರಹವಾಗಿದ್ದು, 39 ರಿಂದ 40 ಲಕ್ಷದಷ್ಟು ಪರಿಹಾರ ಮೊತ್ತ ರೈತರ ಖಾತೆಗೆ ಜಮೆಯಾಗುವ ಅವಕಾಶವಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಎಲ್. ತಿಳಿಸಿದರು. ಕೆಲವೊಂದು ತಾಂತ್ರಿಕ ತೊಂದರೆಗಳಿಂದಾಗಿ ಕೆಲವೊಬ್ಬರ ಖಾತೆಗೆ ಹಣ ಜಮೆ ಆಗುತ್ತಿಲ್ಲ. ಸರಕಾರದ ಯಾವುದೇ ಪರಿಹಾರ, ಸವಲತ್ತು ಸಿಗಬೇಕಾದರೂ ಫಲಾನುಭವಿ ಫ್ರೂರ್ಟ್ಸ್ ತಂತ್ರಾಂಶದಲ್ಲಿ ನೊಂದಣಿಯಾಗಿರಬೇಕು ಎಂದರು.
ಉಡುಪಿ ತಾಪಂ ಆಡಳಿತಾಧಿಕಾರಿ ರವೀಂದ್ರ ಮಾತನಾಡಿ, ಜಿಲ್ಲೆಯಲ್ಲಿ ಫ್ರೂರ್ಟ್ಸ್ ತಂತ್ರಾಂಶದಡಿ ಶೇ.100ರಷ್ಟು ಗುರಿ ಸಾಧಿಸುವಂತೆ ಸರಕಾರ ಆದೇಶಿಸಿದ್ದು, ಜಿಲ್ಲಾಧಿಕಾರಿಗಳು ಈ ವಾರದ ಕೊನೆಯೊಳಗೆ ಶೇ.75ರಷ್ಟು ಗುರಿ ಸಾಧಿಸುವುದಕ್ಕೆ ಗಡುವು ಕೊಟ್ಟಿದ್ದಾರೆ. ಉಡುಪಿ, ತುಮಕೂರು, ದಕ್ಷಿಣ ಕನ್ನಡ ಹಾಗೂ ಕೋಲಾರ ಜಿಲ್ಲೆಗಳು ಇದರಲ್ಲಿ ಸಾಕಷ್ಟು ಹಿಂದುಳಿದಿದ್ದು, ಒಂದು ವೇಳೆ ಈ ಗುರಿ ಸಾಧಿಸುವುದಕ್ಕೆ ಸಾಧ್ಯವಾಗದೇ ಹೋದರೆ ಶನಿವಾರ, ರವಿವಾರ ಹಾಗೂ ಸೋಮವಾರ ಈ ಬಗ್ಗೆ ಕಡ್ಡಾಯವಾಗಿ ಜವಾಬ್ದಾರಿಯಿಂದ ಕೆಲಸ ಮಾಡುವುದಕ್ಕೆ ಸೂಚನೆ ನೀಡುವ ಸಾಧ್ಯತೆ ಇದೆ ಎಂದವರು ತಿಳಿಸಿದರು.
ಪ್ರತಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಕಾರ್ಯಕ್ರಮ ಹಾಕಿಕೊಂಡಿದ್ದು, 16 ಗ್ರಾಪಂಗಳ ಪೈಕಿ 3 ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ 100ಕ್ಕೂ ಅಧಿಕ ಶ್ವಾನಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪಂಚಾಯತ್ ಅನುದಾನದ ಆಧಾರದಡಿಯಲ್ಲಿ ಡಿ.26ರಿಂದ ಉಳಿದ ಗ್ರಾಪಂಗಳಲ್ಲೂ ಶಸ್ತ್ರಚಿಕಿತ್ಸೆಯನ್ನು ಆರಂಭಿಸಲಾಗು ವುದು ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿ ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಲೆಕ್ಕಾಧಿಕಾರಿ ಮೆಲ್ವಿನ್ ಥಾಮಸ್ ಬಾಂಜಿ ಉಪಸ್ಥಿತರಿದ್ದರು.







