ಉಡುಪಿ ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಸಂಭ್ರಮ
ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅನಾಥೆಯರು: ಕನ್ಯದಾನ ಮಾಡಿದ ಡಿಸಿ

ಉಡುಪಿ, ಡಿ.20: ಕಳೆದ ಕೆಲವು ವರ್ಷಗಳಿಂದ ಅನಾಥೆಯರಾಗಿ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದು ಕೊಂಡಿದ್ದ ಇಬ್ಬರು ಯುವತಿಯರಿಗೆ ಉಡುಪಿ ಜಿಲ್ಲಾಡಳಿತ ನೇತೃತ್ವದಲ್ಲಿ ಕಂಕಣ ಭಾಗ್ಯ ದೊರೆತಿದೆ. ಅದರಂತೆ ಇಂದು ಎರಡು ಜೋಡಿಗಳು ಅಧಿಕಾರಿಗಳು, ಗಣ್ಯರು ಹಾಗೂ ಆಶ್ರಯ ನಿವಾಸಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿವೆ.
ಕಳೆದ ನಾಲ್ಕು ವರ್ಷಗಳಿಂದ ನಿಲಯದಲ್ಲಿ ವಾಸವಾಗಿರುವ ತುಮಕೂರು ಮೂಲದ ಶೀಲಾ(32) ಅವರನ್ನು ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಬೆದ್ರಾಡಿಯ ಮಹಾಬಲ ಶಾಸ್ತ್ರಿಯ ಪುತ್ರ, ಕೃಷಿಕ ಗಣೇಶ್ ಶಾಸ್ತ್ರಿ(43) ಮತ್ತು ಕಳೆದ ಎರಡು ವರ್ಷಗಳಿಂದ ನಿಲಯದಲ್ಲಿ ಆಶ್ರಯ ಪಡೆದುಕೊಂಡಿರುವ ಭದ್ರಾವತಿ ಮೂಲದ ಕುಮಾರಿ(21) ಅವರನ್ನು ಯಲ್ಲಾಪುರ ಮೂಲದ ಉಡುಪಿ ಜಿಲ್ಲೆಯ ಬೇಳಂಜೆ ದೇವಳದ ಅರ್ಚಕ ಸತ್ಯನಾರಾಯಣ ಶ್ರೀಧರ ಭಟ್(29) ವಿವಾಹವಾದರು.
ಕಳೆದ ಎರಡು ತಿಂಗಳಿನಿಂದ ಜಿಲ್ಲಾಡಳಿತದ ನೇತೃತ್ವದಲ್ಲಿ ವಿವಾಹ ನಿಶ್ಚಯ ಕಾರ್ಯಕ್ರಮ ನಡೆದಿದ್ದು, ಈ ವೇಳೆ ವರರ ಆರೋಗ್ಯ, ನಡತೆ, ಕ್ರಿಮಿನಲ್ ಹಿನ್ನೆಲೆ, ಆದಾಯ ಪರಿಶೀಲಿಸಲಾಗಿತ್ತು. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪರಿವೀಕ್ಷಣಾಧಿಕಾರಿಯಿಂದ ಗೃಹ ತನಿಖೆಯನ್ನು ಕೂಡ ಮಾಡಲಾಗಿತ್ತು. ಈ ಎಲ್ಲ ವಿವರಗಳನ್ನು ಕಲೆ ಹಾಕುವುದರೊಂದಿಗೆ ಜಿಲ್ಲಾಡಳಿತ, ಈ ವಿವಾಹಕ್ಕೆ ಒಪ್ಪಿಗೆ ಸೂಚಿಸಿತು.
ಅದರಂತೆ ಮಹಿಳಾ ನಿಲಯದಲ್ಲಿ ಡಿ.19ರ ಸಂಜೆ ಮೆಹಂದಿ ಕಾರ್ಯಕ್ರಮ ನಡೆದರೆ, ಇಂದು ಬೆಳಗ್ಗೆ ಎರಡು ಜೋಡಿಗಳ ವಿವಾಹ ಮಹೋತ್ಸವವು ಸಾಂಪ್ರದಾಯಿಕವಾಗಿ ಅತ್ಯಂತ ಸಂಭ್ರಮದಿಂದ ನಡೆಯಿತು. ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಅವರೇ ಮುಂದೆ ನಿಂತು ಇಬ್ಬರು ಯುವತಿಯರಿಗೆ ಧಾರೆ ಎರೆದು ಕನ್ಯದಾನ ಮಾಡಿದರು.
ಮಹಿಳಾ ನಿಲಯದಲ್ಲಿ ಮದುವೆ ಚಪ್ಪರ, ಸ್ವಾಗತ ದ್ವಾರ ನಿರ್ಮಿಸಿ, ಆಮಂತ್ರಿತರಿಗೆ ತಂಪು ಪಾನೀಯ ಹಾಗೂ ಗುಲಾಬಿ ಹೂ ನೀಡುವುದರೊಂದಿಗೆ ಸ್ವಾಗತಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕುಟುಂಬದ ಮದುವೆಯಂತೆಯೇ ನಗುಮುಖದೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಅರ್ಚಕರು ಶಾಸ್ತ್ರೋಸ್ತ್ರವಾಗಿ ಅಗ್ನಿ ಸಾಕ್ಷಿಯಾಗಿ ಮದುವೆ ಕಾರ್ಯವನ್ನು ನೆರವೇರಿಸಿದರು.
ಈ ಶುಭ ಸಂದರ್ಭದಲ್ಲಿ ನವ ಜೋಡಿಗಳಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್., ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಎಸ್., ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ, ವಿವಿಧ ಮಹಿಳಾ ಸಂಘ-ಸಟಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಸೇರಿದಂತೆ ನೂರಾರು ಮಂದಿ ಆಶೀರ್ವದಿಸಿದರು.
ಆಮಂತ್ರಿತರು ವಧು-ವರರಿಗೆ ಉಡುಗೊರೆಗಳನ್ನು ನೀಡಿ ಹರಸಿದರು. ನವ ಜೋಡಿಗಳ ಮುಖದಲ್ಲಿಯೂ ಸಹ ಮನೋಲ್ಲಾಸ ಎದ್ದು ಕಾಣುತ್ತಿತ್ತು. ಬಂದ ಆಮಂತ್ರಿತರು ಲಾಡು, ಹೋಳಿಗೆ, ಊಟದ ರಸದೌತಣ ಸವಿದರು.
‘ರಾಜ್ಯ ಮಹಿಳಾ ನಿಲಯದಲ್ಲಿ ವಾಸವಾಗಿರುವ ಹೆಣ್ಣು ಮಕ್ಕಳನ್ನು ಇಬ್ಬರು ವಿವಾಹವಾಗಲು ಮುಂದೆ ಬಂದಿದ್ದು, ವರ ಮತ್ತು ವಧುಗಳ ಪರಸ್ಪರ ಒಪ್ಪಿಗೆ ಯಂತೆ ಈ ಮದುವೆಯನ್ನು ನಿಶ್ಚಯ ಮಾಡಿದ್ದೇವೆ. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಮದುವೆಯನ್ನು ಶಾಸ್ತ್ರೋತ್ಸವವಾಗಿ ನೆರವೇರಿಸಿದ್ದೇವೆ. ಈ ವಿವಾಹ ಕಾರ್ಯಕ್ಕೆ ಸರಕಾರದಿಂದ ನೀಡಲಾದ ಅನುದಾನದಲ್ಲಿ 15ಸಾವಿರ ರೂ.ವನ್ನು ಈ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲಾಗುವುದು. ಅದೇ ರೀತಿ ಈ ಮದುವೆ ಕಾರ್ಯಕ್ಕೆ ಹಲವು ದಾನಿಗಳು ನೆರವು ನೀಡಿದ್ದಾರೆ’
-ಡಾ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ
‘ಕಳೆದ 2-3 ವರ್ಷಗಳಿಂದ ವಧುವಿನ ಅನ್ವೇಷಣೆಯಲ್ಲಿದ್ದು, ಸ್ನೇಹಿತರು ರಾಜ್ಯ ಮಹಿಳಾ ನಿಲಯದಲ್ಲಿ ಹೆಣ್ಣು ಮಕ್ಕಳು ಇರುವ ಬಗ್ಗೆ ತಿಳಿಸಿದ್ದರು. ಅದರಂತೆ ನಾವು ಅಧಿಕಾರಿಗಳನ್ನು ಸಂಪರ್ಕಿಸಿ, ಅವರೊಂದಿಗೆ ವಿಶ್ವಾಸ ಗಳಿಸಿ, ಜಿಲ್ಲಾಡಳಿತ, ನಮ್ಮ ಗುರು-ಹಿರಿಯರು ಹಾಗೂ ವಧುವಿನ ಒಪ್ಪಿಗೆಯೊಂದಿಗೆ ಈ ಮದುವೆ ನಡೆದಿದೆ. ಇದು ನನಗೆ ಸಂತೋಷ ತಂದಿದೆ. ಭವಿಷ್ಯದಲ್ಲಿ ಉತ್ತಮ ಜೀವನ ನಡೆಸುತ್ತೇವೆ’
-ಗಣೇಶ್ ಶಾಸ್ತ್ರಿ, ವರ
‘ಉಡುಪಿಯ ರಾಜ್ಯ ಮಹಿಳಾ ನಿಲಯವು 1976ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಈವರೆಗೆ 24 ಮಹಿಳೆಯರ ವಿವಾಹವು ಈ ಸಂಸ್ಥೆಯಲ್ಲಿ ನಡೆದಿದೆ. ಪ್ರಸ್ತುತ ಇಲ್ಲಿ 63 ಜನ ಮಹಿಳೆಯರು ಹಾಗೂ 5 ಮಂದಿ ಮಕ್ಕಳು ಇದ್ದಾರೆ. ಇವರಲ್ಲಿ ಮೂರು ಹೆಣ್ಣು ಮಕ್ಕಳು ಕಾಲೇಜು ಶಿಕ್ಷಣ ಪಡೆಯುತ್ತಿದ್ದರೆ, ಉಳಿದ ಮಹಿಳೆಯರು ಊದು ಬತ್ತಿ, ಮೇಣದ ಬತ್ತಿ ಸೇರಿದಂತೆ ಮತ್ತಿತ್ತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ’
-ಪುಷ್ಪಾರಾಣಿ, ಅಧೀಕ್ಷಕರು, ರಾಜ್ಯ ಮಹಿಳಾ ನಿಲಯ, ನಿಟ್ಟೂರು







