‘ಗುಲ್ವಾಡಿ ವೆಂಕಟರಾವ್’ ಪ್ರಶಸ್ತಿಗೆ ಜಿ.ಎ.ಬಾವ- ‘ಸಂತೋಷ ಕುಮಾರ ಗುಲ್ವಾಡಿ’ ಪ್ರಶಸ್ತಿಗೆ ಪ್ರೊ.ಸಿದ್ದರಾಮಯ್ಯ ಆಯ್ಕೆ

ಬಾವ, ಸಿದ್ದರಾಮಯ್ಯ
ಕುಂದಾಪುರ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಗುಲ್ವಾಡಿ ಟಾಕೀಸ್ ನೀಡುವ 2023ನೇ ಸಾಲಿನ ಪ್ರತಿಷ್ಠಿತ ‘ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ’ಗೆ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಮತ್ತು ‘ಸಂತೋಷ ಕುಮಾರ ಗುಲ್ವಾಡಿ ಪ್ರಶಸ್ತಿ’ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಸ್ಮರಣ ಫಲಕಗಳನ್ನು ಒಳಗೊಂಡಿರುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಉದಯ ಗಾಂವಕಾರ(ಶಿಕ್ಷಣ), ಡಾ.ಪ್ರಕಾಶ ತೊಳಾರ್(ಮನೋವೈದ್ಯ), ಹಾಜಿ ತೌಫೀಕ್ ಅಬ್ದುಲ್ಲಾ(ಸಮಾಜ ಸೇವೆ), ಜಾನ್ ಡಿಸೋಜ(ಪತ್ರಿಕೋದ್ಯಮ), ರವಿಕಿರಣ ಮುರ್ಡೇಶ್ವರ(ಕಾನೂನು), ಡಾ.ಆದರ್ಶ ಹೆಬ್ಬಾರ(ವೈದ್ಯಕೀಯ), ಮುಹಮ್ಮದ ರಫಿ ಪಾಷ(ಆಡಳಿತ), ವಾಸುದೇವ ಗಂಗೇರ(ರಂಗಭೂಮಿ), ದಸ್ತಗೀರ್ ಸಾಹೇಬ್(ಸಮಾಜ ಸೇವೆ) ಅವರನ್ನು ಗೌರವಿಸಲಾಗುತ್ತದೆ.
ಡಿ.24ರಂದು ಸಂಜೆ 5.30ಕ್ಕೆ ಕೊಟೇಶ್ವರದ ಯುವ ಮೆರೀಡಿಯನ್ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ, ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಹಿರಿಯ ಪತ್ರಕರ್ತ ದಿನೇಶ ಅಮೀನ್ ಮಟ್ಟು ಅತಿಥಿಗಳಾಗಿ ಭಾಗವಹಿಸಲಿರುವರು. ಗುಲ್ವಾಡಿ ಗ್ರಾಮಸ್ಥರ ಹಿತರಕ್ಷಣ ವೇದಿಕೆ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಗುಲ್ವಾಡಿ ಟಾಕೀಸಿನ ಯಾಕೂಬ್ ಖಾದರ್ ಗುಲ್ವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







