ರೈತರು ವೈಜ್ಞಾನಿಕ ಕೃಷಿ, ಹೈನುಗಾರಿಕೆ ಪದ್ದತಿ ಅಳವಡಿಸಿಕೊಳ್ಳಬೇಕು: ಎಸ್.ಪ್ರಕಾಶ್ಚಂದ್ರ ಶೆಟ್ಟಿ
ಕೆದೂರಿನಲ್ಲಿ ‘ಕರುಗಳ ಪ್ರದರ್ಶನ’

ಕುಂದಾಪುರ, ಡಿ.21: ಕೃಷಿ ಹಾಗೂ ಹೈನುಗಾರಿಕೆಯಲ್ಲಿ ವೈಜ್ಞಾನಿಕವಾಗಿ ತೊಡಗಿಸಿಕೊಳ್ಳುವ ಮೂಲಕ ರೈತರು ಕೃಷಿ ಯಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಮಂಗಳೂರಿನ ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಡುಪಿ, ಪಶು ಚಿಕಿತ್ಸಾಲಯ ಕೆದೂರು, ಕೆದೂರು ಗ್ರಾಮ ಪಂಚಾಯತ್, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ಕೆದೂರು, ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ಕೆದೂರು, ಉಳ್ತೂರು, ಕೊರ್ಗಿ, ಚಾರುಕೊಟ್ಟಿಗೆ, ಗುಳ್ಳಾಡಿ ವತಿಯಿಂದ ಡಿ.21ರ ಗುರುವಾರ ಕೆದೂರಿನ ಸರಕಾರಿ ಪ್ರೌಢಶಾಲೆ ವಠಾರದಲ್ಲಿ ನಡೆದ ’ಕರುಗಳ ಪ್ರದರ್ಶನ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಉಭಯ ಜಿಲ್ಲೆಗಳಲ್ಲಿ ಹಾಲಿನ ಉತ್ಪಾದನೆ ಗಣನೀಯವಾಗಿ ಇಳಿಕೆ ಯಾಗುತ್ತಿದೆ. ಏರುತ್ತಿರುವ ಪಶು ಆಹಾರಗಳ ಬೆಲೆ, ರೈತರಿಗೆ ಕೂಲಿಯಾಳು ಗಳ ಸಮಸ್ಯೆಯಿಂದ ಜನರು ವ್ಯವಸ್ಥೆಯಿಂದ ವಿಮುಖರಾಗುತ್ತಿದ್ದಾರೆ. ಈಗಿನ ಕರು ಮುಂದೆ ಉತ್ತಮ ದನವಾಗಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ಸರಕಾರ, ಹಾಲು ಒಕ್ಕೂಟ, ವಿವಿಧ ಸಹಕಾರಿ ಸಂಘಟನೆ ನೇತೃತ್ವ ದಲ್ಲಿ ಪ್ರತಿವರ್ಷದಂತೆ ಕರುಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಾಹಿತಿ, ಮಾರ್ಗದರ್ಶನದ ಜೊತೆಗೆ ಪ್ರಶಸ್ತಿ, ಚಾಂಪಿಯನ್ ಬಹುಮಾನ ನೀಡಿ ಹೈನುಗಾರಿಕೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವಲ್ಲಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ಕೆದೂರಿನ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಕೃಷಿ ಹಾಗೂ ಹೈನುಗಾರರಿಗೆ ಕಷ್ಟದಿಂದ ಲಾಭದತ್ತ ಹೋಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಅಗತ್ಯ ಮಾರ್ಗದರ್ಶ ನಗಳನ್ನು ಇಲಾಖಾಧಿಕಾರಿಗಳು ನೀಡಬೇಕು. ನಿರುದ್ಯೋಗಿ ವಿದ್ಯಾವಂತ ಯುವಕ-ಯುವತಿಯರು ಹೈನುಗಾರಿಕೆಯಿಂದ ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಹಾಲಿನ ದರವನ್ನು ಹೆಚ್ಚಿಸುವ ಜೊತೆಗೆ ಪ್ರೋತ್ಸಾಹ ದರವನ್ನು ಹೆಚ್ಚಿಸಿ ಹೈನುಗಾರಿಕೆಗೆ ಪ್ರೋತ್ಸಾಹಿಸಿದಾಗ ಸಣ್ಣ ರೈತರಿಗೂ ಲಾಭವಾಗಲಿದೆ ಎಂದರು.
ಕೆದೂರು ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಮಾಧವ ಐತಾಳ್, ಕೆದೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಮ ಪೂಜಾರಿ, ಉಳ್ತೂರು ಸಂಘದ ಅಧ್ಯಕ್ಷ ಜಯಶೀಲ ಶೆಟ್ಟಿ, ಕೊರ್ಗಿ ಅಧ್ಯಕ್ಷೆ ಸರೋಜಿನಿ ಹೆಗ್ಡೆ, ಚಾರುಕೊಟ್ಟಿಗೆ ಅಧ್ಯಕ್ಷೆ ದೇವಕಿ ಬಿ. ಶೆಟ್ಟಿ, ಗುಳ್ಳಾಡಿ ಅಧ್ಯಕ್ಷ ವಿಠಲ ಹೆಗ್ಡೆ ಉಪಸ್ಥಿತರಿದ್ದರು.
ಉಡುಪಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಎಂ.ಸಿ ರೆಡ್ಡಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಬಾಬಣ್ಣ ಪೂಜಾರಿ ಸ್ವಾಗತಿಸಿ, ಕೆದೂರು ಪಶು ಚಿಕಿತ್ಸಾಲಯದ ವೈದ್ಯಾ ಧಿಕಾರಿ ಜಯಣ್ಣ ವಂದಿಸಿದರು. ಕೋಟೇಶ್ವರ ಗ್ರಾ.ಪಂ ಪಶುಸಖಿ ಪ್ರೇಮಾ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 160 ಕರುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಮೂರು ಹಂತಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಒಂದು ಚಾಂಪಿಯನ್ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಪ್ರಾರಂಭದಲ್ಲಿ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.







